ಏನಾದರೂ ಆಗು, ಮೊದಲು ಮಾನವನಾಗು

ಚಿತ್ರ : ಚೌಕ
ನಿರ್ಮಾಣ : ದ್ವಾರ್‌ಕೀಶ್, ಯೋಗೀಶ್ ದ್ವಾರ್‌ಕೀಶ್
ನಿರ್ದೇಶನ : ತರುಣ್ ಸುಧೀರ್
ತಾರಾಗಣ : ಪ್ರೇಮ್, ಪ್ರಜ್ವಲ್ ದೇವರಾಜ್, ದಿಗಂತ್, ವಿಜಯರಾಘವೇಂದ್ರ, ಐಂದ್ರಿತಾ ರೇ, ದೀಪಾ ಸನ್ನಿಧಿ, ಪ್ರಿಯಾಮಣಿ ಮುಂತಾದವರು.
ರೇಟಿಂಗ್ : ****

ಮನೋರಂಜನಾತ್ಮಕವಾಗಿ ಆರಂಭವಾಗಿ ಕೊನೆಯಲ್ಲಿ ಮೊದಲು ಮಾನವನಾಗು ಈ ಸಂದೇಶ ಇರುವ ಚಿತ್ರ ‘ಚೌಕ’. ಈ ದೃಷ್ಟಿಯಿಂದ
ದ್ವಾರಕೀಶ್ ನಿರ್ಮಾಣದ ೫೦ನೇ ಚಿತ್ರವಾಗಿ ಇಷ್ಟವಾಗುತ್ತದೆ. ‘ಚೌಕ’ ಚಿತ್ರ ಕನ್ನಡ ಚಿತ್ರ ಇತಿಹಾಸದಲ್ಲಿ ಮೈಲಿಗಲ್ಲಾಗುತ್ತದೆ ಎನ್ನುವುದು ದ್ವಾರಕೀಶ್ ಅವರ ಆಶಯವಾಗಿರುವುದರಿಂದ ಅಂಥ ಪ್ರಯತ್ನವನ್ನು ‘ಚೌಕ’ದಲ್ಲಿ ಮಾಡಲಾಗಿದೆ.
ತಮ್ಮದೇ ಆದ ಮುಗ್ಧತೆ ಮತ್ತು ಪರಿಸ್ಥಿತ ಒತ್ತಡಕ್ಕೆ ಸಿಕ್ಕು ಅಪರಾಧಿಗಳಾಗುವ ನಾಲ್ವರು ಯುವಕರ ಕಥೆಯನ್ನು ಬೆಸೆದು ಮಾನವೀತೆಯನ್ನು ಪ್ರಸ್ತುತಕ್ಕೆ ತಿಳಿಯಪಡಿಸುವ ಉದ್ದೇಶದ ಚಿತ್ರವಾಗಿದೆ. ಪ್ರೇಕ್ಷಕರು ಮನ ಮಿಡಿಯುವ ಸನ್ನಿವೇಶಗಳು ಸಾಕಷ್ಟು ಬರುತ್ತವೆ. ೧೯೮೬ರಿಂದ ಆರಂಭವಾಗಿ ೨೦೧೭ರ ವರೆಗೆ ಕಥೆ ಬೆಸೆದುಕೊಂಡಿದೆ. ಚಿತ್ರವನ್ನು ಸಿನಿಮೀಯವಾಗಿಯೇ ತೆಗೆದುಕೊಂಡು ಹೋಗಿರುವುದರಿಂದ ನೈಜತೆಗೆ ಹೋಲಿಸಿಕೊಂಡು ತರ್ಕಿಸುವುದು ಸೂಕ್ತವಾಗುವುದಿಲ್ಲ. ಉನ್ನತ ಧ್ಯೇಯವನ್ನು ಮನರಂಜನೆಯ ಮೂಲಕ ಸಿನಿಮೀಯವಾಗಿಯೇ ಚಿತ್ರಿಸಿರುವ ಚಿತ್ರ.
‘ಚೌಕ’ ಹೆಸರು ಚೌಕಾಬಾರ ಆಟವನ್ನು ಆಧರಿಸಿ ಮಾಡಿರುವ ಚಿತ್ರ ಎನ್ನುವ ಊಹೆ ಮೂಡಿಸಿತ್ತು. ಆದರೆ ಬಳ್ಳಾರಿ ಜೈಲು ಚೌಕವಾದ ವಿನ್ಯಾಸದಲ್ಲಿರುವುದನ್ನು ಚಿತ್ರದ ಹೆಸರಾಗಿ ಬಳಸಲಾಗಿದೆ. ಪ್ರೇಮ್ ನಟಿಸಿರುವ ಹಕ್ಕಿ ಗೋಪಿ ಪಾತ್ರ, ದಿಗಂತ್‌ನ ಕೃಷ್ಣ, ಪ್ರಜ್ವಲ್ ದೇವರಾಜ್ ಆಗಿರುವ ಅಕ್ಬರ್ ಮತ್ತು ಮಂಗಳೂರಿನ ಶೆಟ್ಟಿ ಯುವಕನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ತರುವ ಮೂಲಕ ಕರ್ನಾಟಕವನ್ನು ಉತ್ತರದಿಂದ ದಕ್ಷಿಣ ಧ್ರುವದವರೆಗೆ ಬೆಸೆಯಲಾಗಿದೆ. ಅಲ್ಲದೆ ಆ ಪಾತ್ರಗಳನ್ನು ಎಲ್ಲಾ ಧರ್ಮವನ್ನು ತಂದಿರುವ ಬುದ್ಧಿವಂತಿಕೆಯೂ ಇದೆ. ವಿಭಿನ್ನ ಕಾಲಘಟ್ಟದಲ್ಲಿ ಬರುವ ಈ ಪಾತ್ರಗಳ ನವಿರಾದ ಪ್ರೇಮಕಥೆಗಳು ವಿಭಿನ್ನವಾಗಿವೆ. ಈ ಪಾತ್ರಗಳು ಒಬ್ಬರಿಗೊಬ್ಬರು ಪರಿಚಿತರಲ್ಲ ಆದರೆ ಎಲ್ಲರಿಗೂ ಏಕೈಕ ಗೆಳೆಯನಾಗಿರುವ ಮಂಜನಾಥ, ಚಿಕ್ಕಣ್ಣನ ಪಾತ್ರದಿಂದಲೇ ಕಥೆ ತೆರೆದುಕೊಳ್ಳುತ್ತದೆ. ಈ ಪಾತ್ರ ಗೆಳೆಯರು ಕೆಟ್ಟ ಮಾರ್ಗದಲ್ಲಿ ನಡೆಯಲು ಕುಮ್ಮಕ್ಕು ನೀಡಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಳ್ಳುತ್ತದೆ. ಆಗೆಲ್ಲಾ ಆತನದೇ ಆತ್ಮಸಾಕ್ಷಿ ಎದುರಾಗಿ ತಪ್ಪನ್ನು ತಿಳಿಸುತ್ತಿರುತ್ತದೆ. ಈ ಸಿನಿಮೀಯ ತಂತ್ರ ಕೂಡ ಭಿನ್ನವಾಗಿದೆ.
ತಮ್ಮದಲ್ಲದ ತಪ್ಪಿಗೆ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಅಪರಾಧಿಗಳಾಗುವ ನಾಲ್ಕೂ ಪಾತ್ರಗಳು ಬಳ್ಳಾರಿ ಜೈಲು ಸೇರಿದಾಗ ಮುಖಾಮುಖಿಯಾಗುತ್ತವೆ. ಅಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆಂದು ಬಂಧಿಯಾಗಿರುವ ಖೈದಿ ವಿಶ್ವನಾಥ್, ಕಾಶೀನಾಥ್ ಪಾತ್ರ ಅವರೆಲ್ಲರಿಗೂ ಗುರುವಾಗಿ ಮತ್ತು ಗುರಿಯೂ ಆಗುತ್ತದೆ. ಜೈಲಿನ ಕಥೆ ಶುರುವಾಗುವುದು ಸಿನೆಮಾದ ನಿಜವಾದ ದ್ವಿತೀಯಾರ್ಧದಲ್ಲಿ ವಿಶ್ವನಾಥ್ ಹಿನ್ನೆಲೆ ಕಥೆ ನಿರೂಪಣೆ ಮತ್ತು ಬೆಳಗಾವಿ ವಿಧಾನಸೌಧದಲ್ಲಿನ ಸ್ವಲ್ಪ ಉದ್ದವೆನಿಸುವ ನಾಲ್ಕು ಪಾತ್ರಗಳ ಸಂಭಾಷಣೆ ಬಿಟ್ಟರೆ ಚಿತ್ರ ಎಲ್ಲಿಯೂ ಎಳೆದಂತೆನಿಸುವುದಿಲ್ಲ ಇಡೀ ಚಿತ್ರ ಮುಂದೇನಾಗುತ್ತದೆ ಎನ್ನುವ ಕೂತೂಹಲವನ್ನು ಕಾಯ್ದುಕೊಳ್ಳುತ್ತದೆ.
ಪ್ರೇಮ್, ದಿಗಂತ್, ಪ್ರಜ್ವಲ್ ದೇವ್‌ರಾಜ್ ಮತ್ತು ವಿಜಯ್ ರಾಘವೇಂದ್ರ ಅಭಿನಯದಲ್ಲಿ ತಮ್ಮ ಪ್ರತಿಭೆಯನ್ನು ದಾಖಲಿಸಿಕೊಂಡಿದ್ದಾರೆ. ಚಿಕ್ಕಣ್ಣ ಮತ್ತು ಕಾಶಿನಾಥ್ ಪಾಲಿಗೆ ತೀರಾ ಅಪರೂಪವೆನಿಸುವ ಪಾತ್ರಗಳಿವು ಅವರನ್ನು ಬಿಟ್ಟರೆ ಬೇರೆಯವರಿಂದ ಸಾಧ್ಯವಿಲ್ಲ ಎನ್ನುವಂತೆ ನಟಿಸಿದ್ದಾರೆ. ದರ್ಶನ್ ಪಾತ್ರ ಇರುವುದು ಕೆಲವೇ ನಿಮಿಷಗಳಾದರೂ ಮಿಂಚು ಮೂಡಿಸುತ್ತದೆ. ನಾಯಕಿಯರಾಗಿರುವ ಐಂದ್ರಿತಾರೈ, ದೀಪಾ ಸನ್ನಿಧಿ, ಭಾವನ, ಶರತ್ ಲೋಹಿತಾಶ್ವ ಎಲ್ಲಾ ಪಾತ್ರಗಳೂ ವಿಶೇಷವಾಗಿಯೇ ನೆನಪಿನಲ್ಲಿ ಉಳಿಯುತ್ತವೆ.
ಯೋಗರಾಜ್ ಭಟ್ಟರ ಸಾಹಿತ್ಯದ ಅಲ್ಲಾಡ್ಸು ಮತ್ತು ರಿಮಿಕ್ಸ್ ಆಡು ಆಟ ಆಡು ಹಾಡುಗಳು ಸನ್ನಿವೇಶಕ್ಕೆ ಪೂರಕವಾಗಿ ಈಗಿನ ಟ್ರೆಂಡ್‌ಗಾಗಿಯೇ ಅಳವಡಿಸಿಕೊಳ್ಳಲಾಗಿದೆ. ಮೊದಲ ನಿರ್ದೇಶನದಲ್ಲೇ ತರುಣ್ ಸುಧೀರ್ ದ್ವಾರಕೀಶ್ ನಿರ್ಮಾಣದ ಸ್ವರ್ಣ ಚಿತ್ರವೆನ್ನುವ ಒತ್ತಡಕ್ಕೆ ಸಿಕ್ಕಿಯೂ ಬುದ್ಧಿವಂತಿಕೆಯಿಂದ ದ್ವಾರಕೀಶ್ ಇಮೇಜಿಗೆ ತಕ್ಕ ಹಾಗೆ ‘ಚೌಕ’ವನ್ನು ಕಟ್ಟಿಕೊಟ್ಟಿದ್ದಾರೆ.
ಐದು ಎಳೆಯಲ್ಲಿ ಕಥೆ ನಡೆಯುವುದರಿಂದ ಪ್ರತಿಯೊಂದಕ್ಕೂ ಪ್ರತ್ಯೇಕ ಹೆಸರಾಂತ ಛಾಯಾಗ್ರಾಕಹಕರು, ಹಾಡುಗಳಿಗೆ ಒಂದೊಂದಕ್ಕೂ ಒಬ್ಬೊಬ್ಬ ಖ್ಯಾತ ಸಂಗೀತ ನಿದೇಶಕರನ್ನು ಬಳಸಿ ಉತ್ತಮ ರಂಜನೆಯ ಚಿತ್ರ ಕೊಡುವ ಉದ್ದೇಶ ಈಡೇರಿದೆ. ಈ ಕಾರಣದಿಂದಾಗಿ ಈಗಿನ ಸಿನೆಮಾದ ವೇಗ ಮತ್ತು ತಂತ್ರಜ್ಞಾನವನ್ನು ‘ಚೌಕ’ ಪಡೆದುಕೊಂಡಿದೆ. ದ್ವಾರ್‌ಕೀಶ್ ಹೊಸತನದಲ್ಲಿ ಚಿತ್ರ ಕಟ್ಟಿಕೊಡುವುದಕ್ಕೆ ಮೊದಲಿನಿಂದಲೂ ಹೆಸರಾದವರು ಅದು ‘ಚೌಕ’ ಚಿತ್ರದಲ್ಲಿಯೂ ಮುಂದುವರಿದಿದೆ. ಸಮಾಜ ಬದಲಾಗಬೇಕು, ಮಾನವೀಯ ಮೌಲ್ಯಗಳು ಉಳಿಯಬೇಕು, ನಿರಪರಾಧಿಗಳು ಶಿಕ್ಷೆಗೊಳಗಾಗಬಾರದು, ಯುವಜನತೆ ಕೈಗೆ ಆಡಳಿತ ಸಿಗಬೇಕು, ನಮ್ಮದು ಶ್ರೇಷ್ಟ ದೇಶವೆನಿಸಬೇಕು ಇಂಥ ಸಾಕಷ್ಟು ವಿಚಾರಗಳನ್ನು ರಂಜನಾತ್ಮಕವಾಗಿ ಸಿನಿಮೀಯ ಚೌಕದಲ್ಲಿಯೇ ಹೇಳಲಾಗಿದೆ.

-ಕೆ.ಬಿ. ಪಂಕಜ

Leave a Comment