ಏಕ ಪಕ್ಷದ ಸ್ಥಿರ ಸರ್ಕಾರ ಸ್ಥಾಪನೆ,ಅಭಿವೃದ್ಧಿ ಪರ ಮತಯಾಚನೆ: ಲಿಂಬಾವಳಿ

ಬೆಂಗಳೂರು,ನ 21 15 ಕ್ಷೇತ್ರಗಳ ಉಪ ಚುನಾವಣೆಗೆ ಸಂಪೂರ್ಣವಾಗಿ ಸನ್ನದ್ದವಾಗಿದೆ, ಚುನಾವಣೆಯಲ್ಲಿ ನಾವು ಏಕ ಪಕ್ಷದ ಸ್ಥಿರ ಸರ್ಕಾರ ಸ್ಥಾಪನೆ ಹಾಗು ಅಭಿವೃದ್ಧಿ ಪರ ಮತಗಳನ್ನು ಕೇಳಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಾಮಗ್ರಿಗಳ ಉದ್ಘಾಟನೆ ಮಾಡಲಾಯಿತು ನಂತರ ಮಾತನಾಡಿದ ಅರವಿಂದ ಲಿಂಬಾವಳಿ,ಸ್ಥಿರ ಸರ್ಕಾರಕ್ಕಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ತಪ್ಪಿ ಹೋಗಿತ್ತು ಈಗ ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಮೂರು ದಶಕದ ನಂತರ ಬಂದಿದೆ ಹಾಗಾಗಿ ಅಭಿವೃದ್ಧಿ ಪರ ಮತ್ತ ಸ್ಥಿರ ಆಡಳಿತಕ್ಕೆ ಮತ ಕೇಳಲಿದ್ದೇವೆ ಎಂದರು.

ಉಪ ಚುನಾವಣೆಯನ್ನು ರಾಜಕೀಯ ಧೃವೀಕರಣ ಎಂದು ಬಿಜೆಪಿ ಭಾವಿಸಲಿದೆ, ಹಿಂದಿನ ಮೈತ್ರಿ ಸರ್ಕಾರ, ಸ್ಥಿರ ಸರ್ಕಾರ ನೀಡದೇ ಇರುವುದು ಹಾಗು ಉತ್ತಮ ಆಡಳಿತ ನೀಡದೇ ಇರುವುದನ್ನು ಧಿಕ್ಕರಿಸಿ ಅನೇಕರು ರಾಜೀನಾಮೆ ಕೊಟ್ಟಿದ್ದಾರೆ ಅದರ ಮೂಲ ಉದ್ದೇಶ ಆ ಸರ್ಕಾರ ಬೇಡ ಎನ್ನುವುದು ಹಾಗಾಗಿ ಈಗ ಉಪ ಚುನಾವಣೆ ಬಂದಿದೆ ಹಾಗಾಗಿ ಮೂರು ವರ್ಷ ಸ್ಥಿರ ಆಡಳಿತ ನೀಡಲು ಮತಯಾಚನೆ ಮಾಡಲಿದ್ದೇವೆ ಎಂದರು.

ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದೆವು, ಸದಾನಂದಗೌಡ,ಜಗದೀಶ್ ಶೆಟ್ಟರ್ ಸೇರಿ ಐದು ವರ್ಷ ಒಳ್ಳೆಯ ಆಡಳಿತ ನೀಡಿದ್ದೆವು, ಈಗ‌ ನಾಲ್ಕು ತಿಂಗಳಿನಲ್ಲಿನ ಆಡಳಿತ, ಪ್ರವಾಹದ ಪರಿಸ್ಥಿತಿ, ಬೆಂಗಳೂರಿನ ಸಂಚಾರ ಸಮಸ್ಯೆ ಸೇರಿ ಹಲವು ವಿಷಯ ಕುರಿತು ನಮ್ಮ ಸರ್ಕಾರ ಆ ಸಮಸ್ಯೆ ಪರಿಹರಿಸುವತ್ತ ತಕ್ಷಣ ಗಮನ ಹರಿಸಿದೆ ಇದನ್ನೆಲ್ಲಾ ಮತದಾರರ ಮುಂದಿಡಲಿದ್ದೇವೆ ಎಂದರು.

15 ಕ್ಷೇತ್ರಗಳ ಚುನಾವಣೆಗೆ ನಮ್ಮ‌ಕೇಡರ್ ಪಡೆ ಸಿದ್ದವಿದೆ. ನವೆಂಬರ್ 23 ರಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ಆರಂಭಿಸಲಿದ್ದಾರೆ.23 ರಂದು ಮುಖ್ಯಮಂತ್ರಿ ಅವರು ಅಥಣಿ, ಕಾಗವಾಡ, ಗೋಕಾಕ್,24ರಂದು ಯಲ್ಲಾಪುರ, ಹಿರೇಕೆರೂರು,ರಾಣೆಬೆನ್ನೂರು,25 ರಂದು ಹೊಸಪೇಟೆ, ಕೆ.ಆರ್.ಪೇಟೆ,ಹುಣಸೂರು 26 ರಂದು ಚಿಕ್ಕಬಳ್ಳಾಪುರ, ಯಶವಂತಪುರ, ಶಿವಾಜಿನಗರದಲ್ಲಿ ಮೊದಲ ಹಂತದ ಪ್ರವಾಸ ಮಾಡಲಿದ್ದಾರೆ ಎಂದರು.

ರಾಜ್ಯಾಧ್ಯಕ್ಷ ಕಟೀಲ್ 23 ರಂದು ಕೆ.ಆರ್.ಪೇಟೆ, ಹುಣಸೂರು, 24 ರಂದು ಮಹಾಲಕ್ಷ್ಮಲೇಔಟ್,ಯಶವಂತಪುರ, 26ರಂದು ಅಥಣಿ, 27 ರಂದು ಕಾಗವಾಡ,ಗೋಕಾಕ್, 28 ರಂದು ಹೊಸಪೇಟೆ, 29 ರಂದು ಯಲ್ಲಾಪುರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇವರಲ್ಲದೇ ನಮ್ಮ ಉಪ ಮುಖ್ಯಮಂತ್ರಿಗಳು, ಸಚಿವರು ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದರು.

15 ಕ್ಷೇತ್ರಗಳಲ್ಲಿ 4185 ಬೂತ್ ಗಳಿದ್ದು, ಭಾನುವಾರದ ಒಳಗೆ ಬೂತ್ ಸಮಿತಿ ರಚನೆ ಆಗಲಿದೆ,ಐದು ಜನರ ಸಮಿತಿ ರಚನೆ ಮಾಡಲಿದ್ದೇವೆ, ಬೂತ್ ಮಟ್ಟದಿಂದ ಪ್ರಚಾರ ನಡೆಸುವ ಜೊತೆ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚಾರ ಕಾರ್ಯ ನಡೆಸಲು ಎಲ್ಲಾ ಬೂತ್ ಗಳಲ್ಲಿ ವಾಟ್ಸ್ ಆಪ್ ಗ್ರೂಪ್ ಮೂಲಕ ಮಾಹಿತಿಯನ್ನು ಬೂತ್ ಗಳಿಗೆ ತಲುಪಿಸಲಾಗುತ್ತದೆ, ಜಾಲತಾಣಗಳ ಮುಖಾಂತರವೂ ಅಭ್ಯರ್ಥಿಗಳ, ನಾಯಕರ ಚುನಾವಣಾ ಪ್ರಚಾರ ಪ್ರಸಾರ ಆಗಲಿದೆ.ನೂರು‌ದಿನದ ಸಾಧನೆ, ಈ‌ ಚುನಾವಣೆ ಅನಿವಾರ್ಯತೆ, ಕೇಂದ್ರ, ರಾಜ್ಯದ ಸಾಧನೆ ಒಳಗೊಂಡ ಕರಪತ್ರ ಬಿಡುಗಡೆ ಮಾಡಿದ್ದು ಅದನ್ನು ಬೂತ್ ಕಮಿಟಿಗಳು ಮತದಾರರಿಗೆ‌ ತಲುಪಿಸಲುವೆ ಎಂದರು.

ಇಂದು ಮಧ್ಯಾಹ್ನ ಮೂರು ಗಂಟೆವರೆಗೆ ನಾಮಪತ್ರ ವಾಪಸ್ ಗೆ ಸಮಯ ಇದೆ, ಅಲ್ಪ ಸ್ವಲ್ಪ ವ್ಯತ್ಯಾಸ ಇದೆ, ಉಸ್ತುವಾರಿಗಳು ಬಂಡಾಯ ಅಭ್ಯರ್ಥಿಗಳ ಸಂಪರ್ಕಕ್ಕೆ ಯತ್ನಿಸುತ್ತಿದ್ದಾರೆ,ಎಲ್ಲರೂ ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ, ವಾಪಸ್ ಪಡೆಯದೇ ಇದ್ದಲ್ಲಿ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದರು.

ಮಗನ ಪರವಾಗಿ ಅಥವಾ ಬಿಜೆಪಿ ಅಭ್ಯರ್ಥಿ ವಿರುದ್ಧವಾಗಿ ಸಂಸದ ಬಚ್ಚೇಗೌಡ ಯಾವುದೇ ಹೇಳಿಕೆ ನೀಡಿಲ್ಲ, ಒಂದು ವೇಳೆ ಬಚ್ಚೇಗೌಡರು ಅಂತಹ ಹೆಜ್ಜೆ ಇಟ್ಟರೆ ಕ್ರಮ ಕೈಗೊಳ್ಳುವುದು ಖಚಿತ ಆದರೆ ಅವರು ಹಿರಿಯ ನಾಯಕರು ಅಂತಹ ಕೆಲಸ ಮಾಡಲ್ಲ, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ ಎಂದರು.

ಕೆ.ಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗು ಸಚಿವ ಮೇಲೆ ಚಪ್ಪಲಿ ಎಸದ ಪ್ರಕರಣದ ಹಿನ್ನೆಲೆಯಲ್ಲಿ ವಿವಾದವಾಗುವುದ ಬೇಡವೆಂದೇ ಚುನಾವಣಾ ಉಸ್ತುವಾರಿಯನ್ನು ಬದಲಾವಣೆ ಮಾಡಲಾಗಿದೆ.ಅಲ್ಲಿ ಅನಗತ್ಯ ಗೊಂದಲ ಆಗಬಾರದು ಎನ್ನುವ ಕಾರಣ ಮತ್ತು ಇಲಾಖಾ ಕಾರ್ಯಭಾರ ಜಾಸ್ತಿ ಇದೆ ಎಂದ ಸ್ವತಃ ಮಾಧುಸ್ವಾಮಿ ಅವರೇ ಅಪೇಕ್ಷೆ ವ್ಯಕ್ತಪಡಿಸಿದ್ದರು,ಅವರೇ ಉಸ್ತುವಾರಿ ಬದಲಾವಣೆಗೆ ಮನವಿ ಮಾಡಿದ್ದರು ಅದರಂತೆ ಬದಲಾವಣೆ ಮಾಡಲಾಗಿದೆ ಇದೆಲ್ಲಾ ಪಕ್ಷದ ಆಂತರಿಕ ವಿಷಯ ಎಂದರು.

ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುವಂತೆ ಸುಮಲತಾ ಸಂಪರ್ಕ ಮಾಡುತ್ತಿದ್ದೇವೆ ಅವರು ಬೆಂಬಲ ನೀಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದರು.ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಲ್ಬರ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ, 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಭೂಮಿ ಪೂಜೆ ಮಾಡಿದ್ದರು ಈಗ ನಾಳೆ ಮುಖ್ಯಮಂತ್ರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನಿಂದ ಗುಲ್ಬರ್ಗ ಕ್ಕೆ ನಾಳೆ ಅಧಿಕೃತ ಸಂಚಾರ ಆರಂಭ ಆಗಲಿದೆ. ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣ ಮತ್ತು ಪ್ರಯಾಣಿಕರಿಗೆ ಸೌಕರ್ಯ ಕಲ್ಪಿಸಿತ್ತಿರುವುದಕ್ಕೆ ಮೋದಿಗೂ ಧನ್ಯವಾದ ಸಲ್ಲಿಕೆ ಮಾಡುವುದಾಗಿ ತಿಳಿಸಿದರು.

Leave a Comment