ಏಕೀಕರಣಕ್ಕೆ ಲಿಗಾಡೆ ಕೊಡುಗೆ ಅಪಾರ-ಶಾಂತಲಿಂಗ ಶ್ರೀ

ನವಲಗುಂದ,ಫೆ17 ಕನ್ನಡ ಏಕೀರಕರಣಕ್ಕೆ ಜಯದೇವಿತಾಯಿ ಲಿಗಾಡೆ ಕೊಡುಗೆ ಅಪಾರ ಎಂದು ಬೈರನಹಟ್ಟಿ ವಿರಕ್ತಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು  ಹೇಳಿದರು.
ಅವರು ಪಟ್ಟಣದ ಹುರಕಡ್ಲಿ ಅಜ್ಜನವರ ಕಲ್ಯಾಣಕೇಂದ್ರದಲ್ಲಿ ಕನ್ನಡ ಸಾಹಿತ್ಯ, ಜಾನಪದ ಮತ್ತು ಶರಣ ಸಾಹಿತ್ಯ ಪರಿಷತ್, ಸಂಸ್ಕøತಿ ವೇದಿಕೆ ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಹಾಗೂ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ ಸಹಯೋಗದಲ್ಲಿ ನಡೆದ ಕರ್ನಾಟಕ ಏಕೀಕರಣ ಷಷ್ಠಿ ಪೂರ್ತಿ ಸಮಾರಂಭ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರರ 46ನೇ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇಂದು ನಾಡು ಅನುಭವಿಸುತ್ತಿರುವ ಕರ್ನಾಟಕ ಏಕೀಕರಣದ ಫಲ ಬಯಸಿದಾಕ್ಷಣ ದೊರೆಯುವುದಿಲ್ಲ. ಕನ್ನಡಾಭಿಮಾನ ಸಹಸ್ರಾರು ಕನ್ನಡಿಗರ ಕೆಚ್ಚೆದೆಯ ಹೋರಾಟದ ಫಲಶ್ರುತಿಯೇ ಕರ್ನಾಟಕ ಏಕೀಕರಣದ ಭಾಗ್ಯ. “ದೊರೆತ ಏಕೀಕರಣದ ಸಾರ್ಥಕ್ಯಕ್ಕೆ ಕನ್ನಡಿಗರಲ್ಲಿ ಭಾಷಾಭಿಮಾನ, ನಾಡ ಪ್ರೇಮ ಉಳಿಸಿ ಬೆಳೆಸಿಕೊಳ್ಳಬೇಕಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಬಸಮ್ಮ ನರಸಾಪೂರ ಉಪನ್ಯಾಸ ಮಾಲಿಕೆಯ ಅಂಗವಾಗಿ ಮಾತನಾಡಿದ ಅವರು, ಗಡಿ ಪ್ರದೇಶದಲ್ಲಿದ್ದು ಮರಾಠೀಮಯ ವಾತಾವರಣದಲ್ಲಿಯೂ ಕನ್ನಡಾಭಿಮಾನದಿಂದ ಭಾಷೆ-ನಾಡು ಕುರಿತಾಗಿ ಕಳಕಳಿಯಿಂದ ಶ್ರಮಿಸಿದ ದಿಟ್ಟ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ, ಮನೆ ಮಾತು ಮರಾಠಿ ಅವರಿಗೆ ಕನ್ನಡ ಕುರಿತಾದ ಅಭಿಮಾನ ಬೇಕಿರಲಿಲ್ಲ. ಅದರ ಒಳ ಮನಸ್ಸಿನಲ್ಲಿಯ ಕನ್ನಡ ನಾಡು-ನುಡಿ ನಿಷ್ಠೆ ಅವರನ್ನು ಕೈ ಕಟ್ಟಿಕೊಂಡು ಕುಳಿತುಕೊಳ್ಳಲು ಬಿಡಲಿಲ್ಲ. ಗಡಿ ಪ್ರದೇಶದಲ್ಲಿ ಏಕಾಂಗಿಯಾಗಿ ಶ್ರಮಿಸಿದರು. ಅವರ ಕನ್ನಡಾಭಿಮಾನದ ಶ್ರಮದ ಬೆವರಿನ ಬೆಲೆ ಅಂದು ಏಕೀಕರಣಕ್ಕೆ ನಾಂದಿ ಹಾಡಿತು. ವಚನ-ಹಾಡುಗಳ ಮೂಲಕ ನಾಡ ಜಾಗೃತಿಗೆ ಮುನ್ನುಡಿ ಬರಹ ಅವಿಸ್ಮರಣೀಯರು ಜಯದೇವಿ ತಾಯಿ ಲಿಗಾಡೆ ಎಂದು ಸ್ಮರಿಸಿದರು.
ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ  ಎ.ಬಿ.ಕೊಪ್ಪದ ಮಾತನಾಡಿ, ಮಠಾಧೀಶರಿಂದ ಕರ್ನಾಟಕ ಏಕೀಕರಣ ಕಾರ್ಯಕ್ರಮಗಳಿಗೆ ಸ್ಪೂರ್ತಿ, ಪ್ರೇರಣೆಯಿಂದ  ಸಾರ್ಥಕಗೊಳ್ಳುವಂತಾಗಿವೆ. ಮಠಾಧೀಶರ ನಾಡು-ನುಡಿ ಅಭಿಮಾನ ಪ್ರಶಂಸನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಸಿ.ಎಸ್.ಹೊಸಮಠ ಮಾತನಾಡಿ, ನಾಡು ಒಂದಾದ ಮಾತ್ರಕ್ಕೆ ಸಮಗ್ರ ಅಭಿವೃದ್ಧಿ ಸುಲಭ ಸಾಧ್ಯವಲ್ಲ. ನಾಡು-ನುಡಿಯ ಅಭಿವೃದ್ದಿಗೆ ನೂರೆಂಟು ವಿಘ್ನಗಳು ತೊಡಕಾಗಿ ಕಾಡುತ್ತಿವೆ. ನಾಡಿನ ಕೆಲವು ಪ್ರದೇಶಗಳು ಹಲವಾರು ಒತ್ತಡದೊಂದಿಗೆ ಅನೇಕವೆನಿಸುತ್ತಿವೆ. ಆದರೆ, ಈ ಎಲ್ಲ ಬೇಧ-ಭಾವ, ತಾರತಮ್ಯ ಒದಗಿಸಿ ನಾಡನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಡಿನ ಸರ್ವತೋಮುಖ ಏಳಿಗೆಗಾಗಿ ನಿರಂತರ ಶ್ರಮಿಸಬೇಕಾಗಿದೆ ಎಂದರು.
ಪ್ರಾಚಾರ್ಯ ಡಿ.ಎಂ.ನಿಡವಣಿ, ಹಿರಿಯ ಸಾಹಿತಿ ಅನಂತ ಸುಂಕದ,  ಪ್ರೊ.ಜಿ.ಎಸ್.ಪ್ರಭಯ್ಯನವರಮಠ, ಬಸವರಾಜ ಹೊನ್ನಕುದರಿ ಉಪಸ್ಥಿತರಿದ್ದರು. ಪ್ರಕಾಶ ಹೂಗಾರ ಸ್ವಾಗತಿಸಿದರು, ಡಿ.ಎಚ್.ಮಳಲಿ ನಿರೂಪಿಸಿದರು. ಎಂ.ಎ.ಕಟಗಿ ವಂದಿಸಿದರು.

Leave a Comment