ಏಕಾಗ್ರತೆ, ಸತತ ಪ್ರಯತ್ನದಿಂದ ಸಾಧನೆ ಸಾಧ್ಯ- ಚಿಕ್ಕಮಾಳಿಗೆ

ಕೊಳ್ಳೇಗಾಲ, ಆ.13- ವಿದ್ಯಾರ್ಥಿಗಳು ಕೇವಲ ವೈದ್ಯ, ಇಂಜಿನಿಯರ್ ವೃತ್ತಿಗಳನ್ನು ಅಲಂಕರಿಸುವ ಗುರಿ ಹೊಂದುವ ಬದಲು ಕೆಎಎಸ್, ಐಎಎಸ್, ಐಪಿಎಸ್ ಹುದ್ದೆಗಳ ಕಡೆಗೆ ಆಸಕ್ತಿ ತೋರಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ ಅವರು ಕರೆ ನೀಡಿದರು.
ಪಟ್ಟಣದ ಭೀಮನಗರ ಬಡಾವಣೆಯ ಮಾತೆ ಸಾವಿತ್ರಿಬಾಯಿಪುಲೆ ಜ್ಞಾನ ಮಂದಿರದಲ್ಲಿ ಭೀಮನಗರ ಸರ್ಕಾರಿ ನೌಕರರ ಸಂಘದವತಿಯಿಂದ ಶನಿವಾರ ಸಂಜೆ 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಏಕಾಗ್ರತೆ ಮತ್ತು ಸತತ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂಬುದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿರೂಪಿಸಿದ್ದು, ಅವರನ್ನು ಎಲ್ಲಾ ವಿದ್ಯಾರ್ಥಿಗಳು ಮಾದರಿಯಾಗಿಟ್ಟುಕೊಂಡು ಶೈಕ್ಷಣಿಕ ಪ್ರಗತಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಂಘ, ಸಂಸ್ಥೆಗಳು ಉತ್ತಮ ಅಂಕಗಳಿಸಿದವರನ್ನು ಪ್ರೋತ್ಸಾಹಿಸುವುದರ ಜೊತೆಗೆ ಪರೀಕ್ಷೆಯಲ್ಲಿ ಅನುತಿರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದೆ ಬರುವ ವಿಷಯವಾರು ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಭೀಮನಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಸುಂದರಮೂರ್ತಿ ಅವರು ಮಾತನಾಡಿ, ಪ್ರಸ್ತುತ ಮೊಬೈಲ್, ಟಿವಿ ಕಡೆಗೆ ಆಕರ್ಷಿತರಾಗದೇ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒಲವು ತೋರಿಸುವಂತೆ ಕರೆ ನೀಡಿದರು.
ಕಳೆದ 4 ವರ್ಷದ ಹಿಂದೆ ಭೀಮನಗರ ಬಡಾವಣೆಯ ಸಮಾನ ಮನಸ್ಕರರು ಸೇರಿ ಭೀಮನಗರ ಸರ್ಕಾರಿ ನೌಕರರ ಸಂಘವನ್ನು ಸ್ಥಾಪಿಸಿದ್ದು, ಈ ಮೂಲಕ ಬಡಾವಣೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಸಂಘದವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಭೀಮನಗರದಲ್ಲಿ ಕೈಗೊಳ್ಳುವ ಗುರಿ ಹೊಂದಲಾಗಿದೆ ಎಂದ ಅವರು, ಕಳೆದ ವರ್ಷ ಭೀಮನಗರದಲ್ಲಿ 75 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಆದರೆ, ಈ ಬಾರಿ ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆ ಕಾಣಿಸುತ್ತಿದ್ದು, ಕೇಲವ 54 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ ಎಂದರು.
ಪ್ರತಿ ವರ್ಷವೂ ಬಡಾವಣೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸುವ ಗುರಿ ಸಾಧಿಸಬೇಕು. ಮೊಬೈಲ್, ಟಿವಿಗಳಿಗೆ ಆಕರ್ಷಿತರಾಗದೇ, ಓದಿನಕಡೆಗೆ ಹೆಚ್ಚು ಆಸಕ್ತಿ ತೋರಬೇಕು. ಓದುವ ವಿದ್ಯಾರ್ಥಿಗಳಿಗೆ ಸಂಘ ಹೆಚ್ಚು ಪ್ರೋತ್ಸಾ ನೀಡಲಿದ್ದು, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯದೊಂದಿಗೆ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದು ಶೈಕ್ಷಣಿಕ ಪ್ರಗತಿ ಹೊಂದಲು ಕರೆ ನೀಡಿದರು.
ನಾಗರೀಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎಂ.ನಟರಾಜುಮಾಳಿಗೆ ಅವರು ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಭೀಮನಗರದ ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ಸ್ಪೋಕನ್ ಇಂಗ್ಲಿಷ್, ಇಂಗ್ಲಿಷ್ ಗ್ರಾಮರ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ತರಬೇತಿ ಕಾರ್ಯಗಾರ ಆರಂಭಿಸುವ ಭರವಸೆ ನೀಡಿದರು. ನಗರಸಭಾ ಸದಸ್ಯ ಎಸ್.ರಮೇಶ್ ಅವರು ಮಾತನಾಡಿ, ಭೀಮನಗರ ವಿದ್ಯಾರ್ಥಿಗಳು ಯಾವುದೇ ಅಪರಾಧ ಮಾಡದಿದ್ದರೂ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕುತ್ತಿರುವುದು ದುರಂತ. ಇದರಿಂದ ಉತ್ತನ್ನತ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿಗಳು ಸರ್ಕಾರಿ ನೌಕರಿಗೆ ತೆರಳಲಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಮೈಸೂರು ಸೋಮಾನಿ ಬಿ,ಇಡಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಸ್.ವಿಜಯಕುಮಾರ್ ಅವರು ಮಾತನಾಡಿ, ಹಿಂದೆಲ್ಲ ಭೀಮನಗರದಲ್ಲಿ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷಿಣಿಸುತ್ತಿದೆ. ಈ ಬಗ್ಗೆ ಬಡಾವಣೆಯಲ್ಲಿ ಮುಖಂಡರು ಹೆಚ್ಚರವಹಿಸಬೇಕು. ವಿದ್ಯಾರ್ಥಿಗಳೊಂದಿಗೆ ಕೌನ್ಸಿಲಿಂಗ್ ನಡೆಸಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೆಲಸವಾಗಬೇಕಿದೆ ಎಂದರು.
ಸಮಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಪ್ರಬಾರ ಅಧ್ಯಕ್ಷ ಸಿ.ನಾಗರಾಜು, ದಿ.ಸಣ್ಣಮ್ಮ ದತ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಮಹದೇವನ್, ಯಜಮಾನರಾದ ಕೆ.ಜೆ.ಜವರಪ್ಪ, ನಟರಾಜ್, ಸಿದ್ದಾರ್ಥ, ಎಸ್.ಸಿದ್ದರಾಜು, ಕೆ.ಆನಂದ್, ಎಸ್.ಕುಮಾರ್, ಎಸ್.ಎಲ್.ನಿಂಗರಾಜ್, ಪಿ.ರಾಜೇಂದ್ರಪ್ರಸಾದ್, ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ರಾಜೇಶ್, ಭೀಮನಗರ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಸ್.ರಾಚಪ್ಪಾಜಿ, ಕಾರ್ಯದರ್ಶಿ ನಟೇಶ್, ಸಹ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಹೆಚ್.ಶಶಿಧರ್, ನಿರ್ಧೇಶಕ ಆರ್.ಮಹದೇವ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Comment