ಏಕಾಂಗಿ ಪ್ರತಿಭಟನೆ

ಮೈಸೂರು. ಮಾ.14- ವಿಶ್ವವಿದ್ಯಾನಿಲಯದಲ್ಲಿನ ಹಾಸ್ಟೆಲ್ ಒಂದರಲ್ಲಿ ಅಡಿಗೆಯವರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ನ್ಯಾಯ ಕೊಡಿಸಿ ಇಲ್ಲವೇ ದಯಾಮರಣ ನೀಡಿ ಎಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ: ಉದ್ಬೂರು ನಿವಾಸಿ ಲಕ್ಷ್ಮಿನಾರಾಯಣ್ ಎಂಬ ದಲಿತ ಯುವಕ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಹಾಸ್ಟೇಲ್ ಒಂದರಲ್ಲಿ ಅಡುಗೆ ಕೆಲಸಕ್ಕೆ ನಿಯುಕ್ತಿಗೊಂಡಿದ್ದರು. ಆದರೆ ಇಲ್ಲಿ ಹಾಸ್ಟೇಲ್ ಗೆ ಸಂಬಂಧಪಡದ ವ್ಯಕ್ತಿಗಳು ಬಂದು ತನಗೆ ಊಟ ಕೊಡು, ಶರಾಬು ತಂದು ಕೊಡು, ಗಾಂಜಾ ತರಿಸಿಕೊಡು ಎಂದು ಪೀಡಿಸುವುದಲ್ಲದೇ, ತನ್ನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಲಕ್ಷ್ಮಿನಾರಾಯಣ್ ಸರಸ್ವತಿಪುರಂ ಠಾಣೆಗೆ ಈಗಾಗಲೇ ದೂರು ನೀಡಿದ್ದರು. ಆದರೆ ಪೊಲೀಸರು ದೂರು ಕೇಳಿದರೇ ವಿನಃ ಸ್ಥಳಕ್ಕೆ ಬಂದು ನೋಡುವುದಾಗಲಿ, ಪ್ರಕರಣ ದಾಖಲಿಸಿಕೊಳ್ಳುವುದಾಗಲಿ ಏನನ್ನೂ ಮಾಡಿರಲಿಲ್ಲ. ಹಾಸ್ಟೇಗೆ ಬರುವ ಪುಂಢರ ಹಾವಳಿ ದಿನೇ ದಿನೇ ಹೆಚ್ಚುತ್ತ ಹೋಯಿತೇ ವಿನಃ ಕಡಿಮೆಯಾಗಲಿಲ್ಲ. ಇದರಿಂದ ನೊಂದ ಲಕ್ಷ್ಮಿನಾರಾಯಣ್ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ತನಗೆ ದಯಾಮರಣ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕಾಗಮಿಸಿದ ಲಕ್ಷ್ಮಿಪುರಂ ಠಾಣೆಯ ಪೊಲೀಸರು ಯುವಕನಿಂದ ಸಂಪೂರ್ಣ ವಿವರ ಪಡೆದು ಸರಸ್ವತಿಪುರಂ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

Leave a Comment