ಏಕದಿನ ಸರಣಿ ಗೆಲ್ಲುವತ್ತ ಟೀಮ್‌ ಇಂಡಿಯಾ ಚಿತ್ತ

ಪೋರ್ಟ್‌ ಆಫ್‌ ಸ್ಪೇನ್‌, ಆ 13 -ಸತತ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಲಯಕ್ಕೆ ಮರಳುವತ್ತ ಗಮನ ಹರಿಸಿದರೆ ಟೀಮ್‌ ಇಂಡಿಯಾ ನಾಳೆ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದು ಏಕದಿನ ಸರಣಿ ಗೆಲ್ಲುವತ್ತ ಗಮನ ಹರಿಸಿದೆ.

ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಹೆಬ್ಬೆರಳು ಗಾಯಕ್ಕೆ ಒಳಗಾಗಿ ತಂಡದಿಂದ ಹೊರಗುಳಿದಿದ್ದ ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಕೆರಿಬಿಯನ್‌ ಪ್ರವಾಸಕ್ಕೆ ಮರಳಿದ್ದು, ವಿಂಡೀಸ್‌ ವಿರುದ್ಧದ ಟಿ-20 ಸರಣಿಯಲ್ಲಿ ಕ್ರಮವಾಗಿ 1, 23, 3 ರನ್‌ ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ ಎರಡು ರನ್‌ ಗಳಿಸಿದ್ದಾರೆ. ಬ್ಯಾಟಿಂಗ್‌ ಲಯ ಕಳೆದುಕೊಂಡು ತೀವ್ರ ಒತ್ತಡಕ್ಕೆ ಒಳಗಾಗಿರುವ ಧವನ್‌ ಎರಡು ಬಾರಿ ಶೆಲ್ಡನ್ ಕಾಟ್ರೆಲ್‌ ಅವರ ಇನ್‌ ಸ್ವಿಂಗ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ದೆಹಲಿ ಬ್ಯಾಟ್ಸ್‌ಮನ್‌ ನಿಗದಿತ ಓವರ್‌ಗಳ ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಯೋಜನೆಯಲ್ಲಿದ್ದರು. ಆದರೆ, ಕಳೆದ ನಾಲ್ಕೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ, ಇನ್ನುಳಿದಿರುವ ಒಂದು ಪಂದ್ಯದಲ್ಲಿ ರನ್‌ ಹೊಳೆ ಹರಿಸಬೇಕಾದ ಅನಿವಾರ್ಯತೆಗೆ ಅವರು ಒಳಗಾಗಿದ್ದಾರೆ.

ಟೀಮ್‌ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ರಿಷಭ್‌ ಪಂತ್‌ ಜತೆಗೆ ಶ್ರೇಯಸ್‌ ಅಯ್ಯರ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಪಂತ್‌, ನಂತರ ಕೊನೆಯ ಪಂದ್ಯದಲ್ಲಿ ಮಿಂಚಿದ್ದರು. ಆದರೆ, ಎರಡನೇ ಏಕದಿನ ಪಂದ್ಯದಲ್ಲಿ ವಿಫಲರಾಗಿದ್ದರು. ಆದಾಗ್ಯೂ ವಿರಾಟ್‌ ಅವರು ಪಂತ್‌ ಪರ ಬ್ಯಾಟ್‌ ಬೀಸಿದ್ದರು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ  ಶ್ರೇಯಸ್‌ ಅಯ್ಯರ್‌ 68 ಎಸೆತಗಳಲ್ಲಿ 71 ರನ್‌ ಸಿಡಿಸಿರುವುದು ಪಂತ್‌ ಅವರ ನಾಲ್ಕನೇ ಸ್ಥಾನಕ್ಕೆ ಕುತ್ತು ಬರಬಹುದು.

ನಿನ್ನೆಯಷ್ಟೆ ಸುನೀಲ್ ಗವಾಸ್ಕರ್‌, ಶ್ರೇಯಸ್‌ ಅಯ್ಯರ್‌ ಅವರು ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ, ರಿಷಭ್‌ ಪಂತ್‌ ಅವರನ್ನು ಧೋನಿ ಸ್ಥಾನದಲ್ಲಿ ಐದು ಅಥವಾ ಆರನೇ ಸ್ಥಾನದಲ್ಲಿ ಕಣಕ್ಕೆ ಇಳಿಸಬೇಕೆಂದು ಸಲಹೆ ನೀಡಿದ್ದರು.

ಆರಂಭಿಕರಾದ ಶಿಖರ್‌ ಧವನ್‌ ಹಾಗೂ ರೋಹಿತ್‌ ಶರ್ಮಾ ಬಹುಬೇಗ ವಿಕೆಟ್‌ ಒಪ್ಪಿಸಿದ ಬಳಿಕ ನಾಯಕ ವಿರಾಟ್‌ ಕೊಹ್ಲಿ 125 ಎಸೆತಗಳಲ್ಲಿ 120 ರನ್‌ ಗಳಿಸಿದ್ದರು. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಸಾಥ್‌ ನೀಡಿದ್ದರು.

ಬೌಲಿಂಗ್‌ ವಿಭಾಗದಲ್ಲಿ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಿದ್ದ ಭುವನೇಶ್ವರ್‌ ಕುಮಾರ್‌ ಅವರು 31 ರನ್‌ ನೀಡಿ ಪ್ರಮುಖ ನಾಲ್ಕು ವಿಕೆಟ್‌ ಕಿತ್ತಿದ್ದರು. ಇದೇ ವಿಶ್ವಾಸದಲ್ಲಿ ಇರುವ ಅವರು ನಾಳಿನ ಪಂದ್ಯದಲ್ಲೂ ಮುಂದುವರಿಸುವ ತುಡಿತದಲ್ಲಿದ್ದಾರೆ.

ಭುವಿ ಜತೆಗೆ ಹಿರಿಯ ವೇಗಿ ಮೊಹಮ್ಮದ್‌ ಶಮಿ (39 ಕ್ಕೆ 2) ಹಾಗೂ ಕುಲ್ದೀಪ್‌ ಯಾದವ್‌(59 ಕ್ಕೆ2) ಅವರು ವಿಕೆಟ್‌ ಕಿತ್ತಿದ್ದರು. ಆದರೆ, ಎಡಗೈ ಸ್ಪಿನ್ನರ್‌ ಮುಂದಿನ ಪಂದ್ಯಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ.

ನಾಳಿನ ಪಂದ್ಯದಲ್ಲಿಯೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಆದರೆ, ಹಿರಿಯ ವೇಗಿ ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡಿದರೆ, ಯುವ ವೇಗಿ ನವದೀಪ್‌ ಸೈನಿಗೆ ಅವಕಾಶ ನೀಡಬಹುದು.

ಮತ್ತೊಂದೆಡೆ ಟಿ-20 ಸರಣಿ ಕೈ ಚೆಲ್ಲಿಕೊಂಡಿರುವ ವೆಸ್ಟ್‌ ಇಂಡೀಸ್‌ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲೂ ಸೋಲು ಕಂಡಿದೆ. ನಾಳಿನ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸಿಕೊಳ್ಳುವ ಯೋಜನೆಯಲ್ಲಿ ಕಣಕ್ಕೆ ಇಳಿಯಲಿದೆ.

ಆದರೆ, ವಿಂಡೀಸ್‌ ಬ್ಯಾಟಿಂಗ್‌ ವಿಬಾಗ ಹೆಚ್ಚಿನ ಹೊಣೆಯನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ವೆಸ್ಟ್‌ ಇಂಡೀಸ್‌ನ ಯುವ ಪ್ರತಿಭೆಗಳಾದ ಶಾಯ್‌ ಹೋಪ್‌, ಶಿಮ್ರೊನ್‌ ಹೆಟ್ಮೇರ್‌ ಹಾಗೂ ನಿಕೋಲ್ಸ್‌ ಪೂರನ್‌ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ನಾಳೆ ಮತ್ತೊಂದು ಅವಕಾಶ ಸಿಗಲಿದೆ.

ಏಕದಿನ ಸರಣಿ ಬಳಿಕ ವೆಸ್ಟ್‌ ಇಂಡೀಸ್‌ ಹಾಗೂ ಭಾರತ ಆ. 22 ರಂದು ಅಂಟಿಗುವಾ ದಲ್ಲಿ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ವೆಸ್ಟ್‌ ಇಂಡೀಸ್‌:

ಕ್ರಿಸ್‌ ಗೇಲ್‌, ಕೇಮರ್‌ ರೋಚ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಜೇಸನ್‌ ಹೋಲ್ಡರ್‌(ನಾಯಕ), ಎವಿನ್‌ ಲೆವಿಸ್‌, ಶೆಲ್ಡನ್‌ ಕಾಟ್ರೆಲ್‌, ನಿಕೋಲಸ್‌ ಪೂರನ್‌, ಫ್ಯಾಬಿಯನ್‌ ಅಲ್ಲೆನ್‌, ಶಿಮ್ರಾನ್‌ ಹೆಟ್ಮೇರ್‌, ಶಾಯ್‌ ಹೋಪ್‌(ವಿ.ಕೀ), ರೋಸ್ಟನ್‌ ಚೇಸ್‌, ಜಾನ್‌ ಕ್ಯಾಂಪ್‌ಬೆಲ್‌, ಕಿಮೋ ಪಾಲ್‌, ಓಶಾನ್‌ ಥಾಮಸ್‌

ಭಾರತ:

ರೋಹಿತ್‌ ಶರ್ಮಾ, ರವೀಂದ್ರ ಜಡೇಜಾ, ವಿರಾಟ್‌ ಕೊಹ್ಲಿ(ನಾಯಕ), ಶಿಖರ್‌ ಧವನ್‌, ಭುವನೇಶ್ವರ್‌ ಕುಮಾರ್‌, ಕೇದಾರ್‌ ಜಾಧವ್‌, ಮೊಹಮ್ಮದ್‌ ಶಮಿ. ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಕುಲ್ದೀಪ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌(ವಿ.ಕೀ), ಖಲೀಲ್‌ ಅಹಮದ್‌, ಮನೀಶ್‌ ಪಾಂಡೆ, ಯಜುವೇಂದ್ರ ಚಾಹಲ್‌,ಕೆ.ಎಲ್‌. ರಾಹುಲ್‌, ನವದೀಪ್‌ ಸೈನಿ

ಸಮಯ: ನಾಳೆ ಸಂಜೆ 07;00

ಸ್ಥಳ: ಕ್ವೀನ್ಸ್‌ ಪಾರ್ಕ್‌ ಓವಲ್‌, ಪೋರ್ಟ್‌ ಆಫ್‌ ಸ್ಪೇನ್‌

Leave a Comment