ಎ‌ಡರು- ತೊಡರು ಎದುರಿಸಿ ಸಿಎಂ ಪಟ್ಟಕ್ಕೇರಿದ ಯೋಗಿ

ನವದೆಹಲಿ, ಮಾ. ೨೦- ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರೂ ಯಾವುದೇ ಎನ್‌ಡಿಎ ಸರ್ಕಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸಚಿವರನ್ನಾಗಿ ಮಾಡಿರಲಿಲ್ಲ. ಯೋಗಿಯನ್ನು ಯಾರೂ ಗಂಭೀರವಾದ ನಾಯಕನೆಂದು ಪರಿಗಣಿಸರಲಿಲ್ಲ. ಅವರ ಬಲಪಂಥೀಯ ಹಿಂದುತ್ವದ ಪ್ರಖರ ವಾಗ್ದಾಳಿಯಿಂದ ಬಹುತೇಕ ಬಿಜೆಪಿ ಕೇಂದ್ರ ನಾಯಕರು ಯೋಗಿಯನ್ನು ಪಕ್ಕಕ್ಕಿಟ್ಟಿದ್ದರೇ ಹೊರತು ಪಟ್ಟಕ್ಕೇರಿಸುವ ಯೋಚನೆ ಮಾಡಿರಲಿಲ್ಲ.

ಹಿಂದೂಗಳ ಏಕತೆಯನ್ನು ಪ್ರತಿಪಾದಿಸುತ್ತಿದ್ದ ಅವರು ಯುಪಿಯಲ್ಲಿ ಅಖಿಲೇಶ್ ಸರ್ಕಾರ ಮಾಡುತ್ತಿದ್ದ ಜಾತೀಯ ಮತ್ತು ಮತೀಯ ತಾರತಮ್ಯಗಳನ್ನು ಪ್ರಬಲವಾಗಿ ವಿರೋಧಿಸುತ್ತಲೇ ಬಂದರು. ಭಾರತ ರಾಷ್ಟ್ರೀಯತೆಯ ಪ್ರತೀಕವಾದ ಹಿಂದುತ್ವವನ್ನು ಕಡೆಗಣಿಸಬೇಡಿ, ಹಿಂದುತ್ವವನ್ನು ಕಡೆಗಾಣಿಸಿದರೆ ಒಂದಲ್ಲ ಒಂದು ದಿನ ಅದಕ್ಕೆ ದಂಡ ತೆರಲೇಬೇಕಾಗುತ್ತದೆ ಎಂದು ಯೋಗಿ ಪದೇ ಪದೇ ಎಚ್ಚರಿಸುತ್ತಿದ್ದರು.

ಆದ್ದರಿಂದ ಯೋಗಿ ಒಬ್ಬ ಬೀದಿ ಹೋರಾಟಗಾರನಂತೆ ಬಿಜೆಪಿಗೆ ಕಂಡರೇ ವಿನಹ ಅವನೊಬ್ಬ ದೊಡ್ಡ ನಾಯಕ ಎಂದು ಭಾವಿಸದೇ ಆತನಿಗೆ ಯಾವುದೇ ಪ್ರಾಮುಖ್ಯವನ್ನು ನೀಡಿರಲಿಲ್ಲ. ಯಾವುದೇ ಸಭೆ ಸಮಾರಂಭಗಳಿಗೆ ಅವರನ್ನು ಆಹ್ವಾನಿಸುತ್ತಿದ್ದುದು ಕಡಿಮೆಯೇ. ಸಂಸತ್ತಿನಲ್ಲೂ ಅವರನ್ನು ವಕ್ರದೃಷ್ಟಿಯಿಂದಲೇ ನೋಡಲಾಗುತ್ತಿತ್ತೇ ವಿನಹ ಅವರೊಬ್ಬ ವಿಮರ್ಶಾತ್ಮಕ ನಾಯಕನ ಗುಣ ಹೊಂದಿದ್ದಾರೆಂಬುದನ್ನು ಗುರುತಿಸಲಿಲ್ಲ. ಅವರು 5 ಬಾರಿ ಲೋಕಸಭಾ ಸದಸ್ಯರಾದರೂ ಅವರನ್ನು ಒಬ್ಬ ಹಿಂದೂವಾದಿ ಸನ್ಯಾಸಿಯಾಗಿಯೇ ಕಂಡರೇ ವಿನಹ ಅವರ ಸಂಘಟನಾತ್ಮಕ ಗುಣಗಳಿಗೆ ಯಾರೂ ಬೆಲೆ ನೀಡಲಿಲ್ಲ.

2014ರಲ್ಲೇ ಸಮಾಜವಾದಿ ಮುಖಂಡ ಮುಲಾಯಂಸಿಂಗ್ ಖಬ್ರಿಸ್ತಾನವನ್ನು ಸರಿಪಡಿಸಲು 300 ಕೋಟಿ ರೂ.ಗಳ ಆರ್ಥಿಕ ನೆರವನ್ನು ಯುಪಿ ಸರ್ಕಾರದಿಂದ ಯೋಗಿಗೆ ಕೊಡಿಸಿದ್ದರೆಂಬುದನ್ನು ಲೋಕಸಭೆಯ ದಾಖಲೆಯಿಂದಲೇ ತಿಳಿಯಬಹುದಾಗಿದೆ. ಇದು ಖಬ್ರಿಸ್ತಾನದ ಗಡಿರಕ್ಷಣೆ ವಿಚಾರವಾಗಿ ಪ್ರಧಾನಿ ಮೋದಿ ಚುನಾವಣೆಗಳ ಸಮಯದಲ್ಲಿ ಮಾಡಿದ್ದಕ್ಕಿಂತ ಬಹು ಹಿಂದೆಯೇ ನಡೆದ ಘಟನೆಯಾಗಿದ್ದು ಯೋಗಿಯೇ ತಮ್ಮ ಲೋಕಸಭಾ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆಂಬುದು ಗಮನಾರ್ಹ.

ಎಲ್ಲಾ ಹಳ್ಳಿಗಳಲ್ಲೂ ವಿವಾದಗಳಿವೆ, ಎಲ್ಲಾ ಕಡೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ, ರಾಜ್ಯ ಸರ್ಕಾರದ ಬೆಂಬಲದಿಂದಲೇ ಇದೆಲ್ಲಾ ಅಕ್ರಮ ಆಗಿದೆ. ಇಂತಹ ಅಕ್ರಮಗಳನ್ನು ನೋಡಿಕೊಂಡು ಜನ ಸುಮ್ಮನಿರುತ್ತಾರೆಯಾ? ಮತೀಯ ಶಕ್ತಿಗಳೆಲ್ಲಾ ಒಂದು ಗೂಡುವುದಿಲ್ಲವೇ? ಎಂದು ಪ್ರಧಾನಿ ಚುನಾವಣಾ ಪ್ರಚಾರದಲ್ಲೇ ಪ್ರಶ್ನಿಸಿದ್ದರು.

ಈ ತಂತ್ರವನ್ನೇ ಬಲವಾಗಿ ನಂಬಿದ್ದು ಯೋಗಿ ಮತೀಯ ಅಸ್ತ್ರವನ್ನೇ ವಿರೋಧಿಗಳ ಮೇಲೆ ಪ್ರಯೋಗಿಸಿ ಹಿಂದೂಗಳು ಈಗಲಾದರೂ ಒಗ್ಗಟ್ಟಾಗಬೇಕೆಂದು ಪ್ರತಿಪಾದಿಸಿದರು. ಅದರ ಫಲವಾಗಿಯೇ ಇಂತಹ ಚುನಾವಣಾ ಫಲಿತಾಂಶ ಉತ್ತರಪ್ರದೇಶದಲ್ಲಿ ಈಗ ಲಭ್ಯವಾಗಿದೆ.

ಆರ್ಎಸ್‌ಎಸ್ ಆಶ್ರಯದಲ್ಲಿ ಕಾಲ್ನಡಿಗೆ ಹಿಂದೂ ಸೈನಿಕರನ್ನು ತಯಾರಿಸುವ ಸನ್ಯಾಸಿ ಎಂದೇ ಹೆಸರು ವಾಸಿಯಾಗಿದ್ದ ಇವರು ಮೊದಲು ಚೋಟೀ ಮಹಾಂತರಾಗಿದ್ದರು. ಅವರ ಗುರು ಅವೈದ್ಯನಾಥರು ಗೋರಖ್‌ಪುರದ ಗೋರಕ್ಷ ಪೀಠದ ಮಹಾಂತರಾಗಿದ್ದಾಗ ಅಪಾರ ಜನಪ್ರಿಯತೆಯನ್ನು ಹಾಗೂ ಜನಬೆಂಬಲ ಹೊಂದಿದ್ದರು.

ಇದರ ಬೆಂಬಲದಿಂದ ಚುನಾವಣೆಯಲ್ಲಿ ಗೆದ್ದ ಪ್ರಾಚೀನ ಮಠ ಪರಂಪರೆಯಿಂದ ಬಂದ ಯೋಗಿಗೆ ದೆಹಲಿ ಪ್ರಶಸ್ತವಾದ ಸ್ಥಳ ಎನಿಸಲಿಲ್ಲ. ಅವರನ್ನು ಯಾರೂ ಭುಜತಟ್ಟಿ ಬೆಂಬಲಿಸಲಿಲ್ಲ, ಬದಲಿಗೆ ಅವರನ್ನು ಹಿಂದುತ್ವವಾದಿ ಎಂದು ಹೀಗಳೆಯ ತೊಡಗಿದರು. 2014ರ ಚುನಾವಣೆಗಳಲ್ಲಿ ಮೋದಿಯನ್ನು ಬೆಂಬಲಿಸುತ್ತಾ ಬಂದ ಯೋಗಿ ರಾಜಕೀಯ ಕಾಲುದಾರಿಯಿಂದ ಮುಖ್ಯರಸ್ತೆಗೆ ಬಂದರು. ಹಾಗೆಯೇ ಅವರ ಪ್ರಾಮುಖ್ಯತೆ ಬಿಜೆಪಿಯಲ್ಲಿ ಏರುತ್ತಾ ಹೋಯಿತು.

ಅಮಿತ್ ಷಾ ಬಿಜೆಪಿ ಅಧ್ಯಕ್ಷರಾದ ನಂತರದಲ್ಲಿ ಪರಿಸ್ಥಿತಿ ಸುಧಾರಿಸ ತೊಡಗಿತು. ಕೂಡಲೇ ಅದರಿಂದ ಯೋಗಿಯ ಸಂಘಟನಾತ್ಮಕ ಶಕ್ತಿಗೆ ಯಾವುದೇ ಬೆಲೆ ಸಿಗದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಭಾರಿ ಗೆಲುವಿನ ಹಿಂದೆ ಯೋಗಿಯ ಪರಿಶ್ರಮ ಇರುವುದನ್ನು ಮೋದಿ ಮತ್ತು ಷಾ ಗುರುತಿಸಿದರು. ಯುಪಿ ಸರ್ಕಾರದ ವೈಫಲ್ಯಗಳನ್ನೇ ತಮ್ಮ ಅಸ್ತ್ರವಾಗಿಸಿಕೊಂಡ ಯೋಗಿ ಜಾತಿ ಮತ್ತು ಮತೀಯ ತಾರತಮ್ಯವನ್ನು ಪ್ರಬಲವಾಗಿ ವಿರೋಧಿಸಿದರಲ್ಲದೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕೆಂದೂ ಪ್ರತಿಪಾದಿಸಿದರು.

ಇದು ಒಂದು ಧೈರ್ಯ-ಸಾಹಸದ ಜೂಜಾಟದಂತೆ ತೋರಿದರೂ ಅದನ್ನು ಮೋದಿ- ಷಾ ಒಪ್ಪಿಕೊಂಡು ಅದೇ ರೀತಿ ಚುನಾವಣಾ ಕಾರ್ಯತಂತ್ರ ರೂಪಿಸಿದ್ದರು. ಅದು ಫಲ ನೀಡಿತು. ಆ ನಂತರದಲ್ಲಿ ಯೋಗಿಯ ಅದೃಷ್ಟವೂ ಖುಲಾಯಿಸಿ ಬಿಜೆಪಿಯಲ್ಲಿ ಪ್ರಮುಖ ನಾಯಕ ಸ್ಥಾನಕ್ಕೆ ಏರಿದರು.

ದಾರಿಹೋಕನಂತಿದ್ದ ಯೋಗಿ ಆದಿತ್ಯನಾಥ ಈಗ ದಾರಿತೋರುವ ಮಾರ್ಗದರ್ಶಕನಾಗಿ ಯುಪಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈ ವಿಲಕ್ಷಣದ ವ್ಯಕ್ತಿ ಧೃವೀಕರಣ ಪ್ರೇರಕ ಶಕ್ತಿಯಾದ, ಸನ್ಯಾಸಿಯೊಬ್ಬ ಕಾವಿ ತೊಟ್ಟು ರಾಜಕೀಯದ ಉತ್ತುಂಗಕ್ಕೇರಿದ ಸಾಹಸದ ದಾರಿಯಲ್ಲಿ ಎಡರುತೊಡರುಗಳೇ ಅಪಾರ.

 

Leave a Comment