ಎಸ್.ಟಿ ಮೀಸಲಾತಿಗೆ ಆಗ್ರಹಿಸಿ ಉಪ್ಪಾರರ ಪ್ರತಿಭಟನೆ

ಬಳ್ಳಾರಿ, ಜ.8: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ ಗೆ) ಸೇರಿಸಲು ಒತ್ತಾಯಿಸಿ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಇಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ, ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಪ್ಪಾರ ಸಮಾಜದ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ರಾಜ್ಯದಲ್ಲಿ ಅಂದಾಜು 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜದ ಬಾಂಧವರು ತೀರಾ ಹಿಂದುಳಿದಿದ್ದಾರೆ. ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸಮಾಜದ ಸರ್ವತೋಮುಖ ಏಳಿಗೆ, ಅಭಿವೃದ್ಧಿಗಾಗಿ ಎಸ್.ಟಿ.ಮೀಸಲಾತಿ ಕಲ್ಪಿಸಬೇಕು ಎಂದರು.

ರಾಜ್ಯ ಸರ್ಕಾರವು ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.ಗೆ) ಸೇರಿಸಲು ಕ್ರಮ ಕೈಗೊಂಡು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು, ಉಪ್ಪಾರ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಬೇಕು, ಉಪ್ಪಾರ ಜನಾಂಗದ ಎಲ್ಲಾ ವಿದ್ಯಾರ್ಥಿಗಳಿಗೆ ಚೆನ್ನಪ್ಪರೆಡ್ಡಿ ಆಯೋಗದ ವರದಿಯಂತೆ ಶಿಕ್ಷಣದಲ್ಲಿ ಸಂಪೂರ್ಣ ಶುಲ್ಕ ವಿನಾಯತಿ ನೀಡಲು ಸರ್ಕಾರವು ಸುತ್ತೋಲೆ ಹೊರಡಿಸಬೇಕು. ರಾಜ್ಯದ ವಿಧಾನ ಪರಿಷತ್ತಿಗೆ ಮತ್ತು ರಾಜ್ಯ ಸಭೆಗೆ ಉಪ್ಪಾರ ಸಮಾಜದ ಧುರೀಣರನ್ನು ನೇಮಕ ಮಾಡಬೇಕು, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಪ್ರತಿವರ್ಷ 100 ಕೋಟಿ ರೂಪಾಯಿಗಳ ಅನುದಾನ ನೀಡಬೇಕು ಮತ್ತಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಶ್ರೀಭಗೀರಥ ಉಪ್ಪಾರ ಸಂಘ ಹಾಗೂ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಗಳು ಭಾಗವಹಿಸಿದ್ದವು.

ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಉಪ್ಪಾರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷ್ಮಣ್ ಉಪ್ಪಾರ, ಸಂಘಟನಾ ಕಾರ್ಯದರ್ಶಿ ಮೂರ್ತಿ ಉಪ್ಪಾರ, ಜಿಲ್ಲಾಧ್ಯಕ್ಷ ಎಱ್ರಿಸ್ವಾಮಿ ಉಪ್ಪಾರ, ಪ್ರಧಾನ ಕಾರ್ಯದರ್ಶಿ ದುರುಗೇಶ್ ಉಪ್ಪಾರ, ತಾಲ್ಲೂಕು ಅಧ್ಯಕ್ಷರಾದ ಕ್ರಿಷ್ಣ ಸಂಗನಕಲ್ಲು, ತಾಲ್ಲೂಕಿನ ಅಧ್ಯಕ್ಷರು, ನಗರ ಅಧ್ಯಕ್ಷರು, ಇತರೆ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

Leave a Comment