ಎಸ್‍ಸಿ, ಎಸ್‍ಟಿ ನಿಗಮಕ್ಕೆ ಅಧ್ಯಕ್ಷರ ನೇಮಿಸಲು ಒತ್ತಾಯ; ಪ್ರತಿಭಟನೆ

ದಾವಣಗೆರೆ.ಜೂ.20; ಎಸ್‍ಸಿ, ಎಸ್‍ಟಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಬೇಕೆಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಎಸ್‍ಸಿ, ಎಸ್‍ಟಿ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ಜಯದೇವ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ನಂತರ ಮೆರವಣಿಗೆ ಮೂಲಕ ಗಾಂಧಿವೃತ್ತ, ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು. ಕಳೆದ 2003 ರಲ್ಲಿ ಪರಿಶಿಷ್ಠ ಜಾತಿ, ಪ.ಪಂಗಡಗಳ ಆಯೋಗ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಇದರಿಂದ ದಮನಿತರಿಗೆ ಬದುಕುವ ವಿಶ್ವಾಸ ಮೂಡಿದಂತಾಗಿದೆ. ಆದರೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ದಲಿತರ ದೂರು ಸ್ವೀಕರಿಸಿ ಸಾಂತ್ವನ ಹೇಳುವ ಅಧಿಕಾರ ಇರುವ ಆಯೋಗಕ್ಕೆ ಇಲ್ಲಿಯವರೆಗೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಆಯೋಗದ ಮುಂದೆ 2752 ಪ್ರಕರಣಗಳುವಿಚಾರಣೆಗೆ ಬಾಕಿ ಇವೆ. ಇರುವ ಕಾರ್ಯದರ್ಶಿಗೆ ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಇತ್ತೀಚೆಗೆ ಗುಂಡ್ಲುಪೇಟೆ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಬೆತ್ತಲೆ ಮಾಡಿ ಮೆರವಣಿಗೆ ನಡೆಸಲಾಗಿದೆ. ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಿದೆ. ದಲಿತರಲ್ಲಿ ಧೈರ್ಯ ತುಂಬಿ ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವ ಅಧಿಕಾರವಿರುವ ಅಧ್ಯಕ್ಷರು ಆಯೋಗಕ್ಕೆ ಇಲ್ಲ. ಆದ್ದರಿಂದ ಆಯೋಗ ಇದ್ದೂ ಸತ್ತಂತಾಗಿದೆ ಶೋಷಣೆಗೆ ಒಳಗಾದ ಜನರ ದುಃಖ-ದುಮ್ಮಾನ ಆಲಿಸುವ ಆಯೋಗಕ್ಕೆ ಬಲ ತುಂಬುವ ಕೆಲಸವನ್ನು ಮುಖ್ಯಮಂತ್ರಿಗಳು ಮುತುವರ್ಜಿಯಿಂದ ಮಾಡಬೇಕಾಗಿತ್ತು. ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸುವ ಕಾಳಜಿಯನ್ನಾದರೂ ತೋರಬೇಕಿತ್ತು. ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣಕಾಯ್ದೆ 1989 ರ ಅಡಿಯಲ್ಲಿ ಈ ಸಮಿತಿ ರಚನೆಯಾಗಿದೆ. ಸಮಿತಿಗೆ ಮುಖ್ಯಮಂತ್ರಿಯೇ ಅಧ್ಯಕ್ಷರು, ರಾಜ್ಯಮಟ್ಟದ ಸಮಿತಿಯು ವರ್ಷಕ್ಕೆ ನಾಲ್ಕು ಸಭೆ ನಡೆಸಬೇಕು. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ, ದಲಿತರ ಯೋಗಕ್ಷೇಮದ ಪರಾಮರ್ಶೆ, ಪ್ರಾಣಾಮಾನದ ರಕ್ಷಣೆಯಲ್ಲಿ ಆಡಳಿತ ಯಂತ್ರ ಎಷ್ಟರ ಮಟ್ಟಿಗೆ ಸಕ್ರಿಯವಾಗಿದೆ ಎಂಬುದನ್ನು ದಾಖಲೆ ಸಹಿತ ಗಮನಿಸುವ ಅಧಿಕಾರಿಗಳನ್ನು ಎಚ್ಚರಿಸುವ ಗುರುತರ ಜವಬ್ದಾರಿ ಈ ಸಮಿತಿಯದ್ದಾಗಿದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದಾಗ 14 ಜಿಲ್ಲೆಗಳಲ್ಲಿ ಇಲ್ಲಿಯವರೆಗೂ ಒಂದು ಸಭೆ ನಡೆಸದಿರುವ ಸಂಗತಿ ತಿಳಿದುಬಂದಿದೆ. ರಾಜ್ಯಮಟ್ಟದ ಸಮಿತಿ ಸಭೆಯನ್ನು ನಡೆಸಿದ್ದರೆ ದಲಿತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಪ್ರಕರಣಗಳ ನೈಜ ಚಿತ್ರಣ ಮುಖ್ಯಮಂತ್ರಿ ಹಾಗೂ ಸಮಾಜಕಲ್ಯಾಣ ಸಚಿವರಿಗೆ ಸಿಗುತ್ತಿತ್ತು ಆದ್ದರಿಂದ ಈ ಕೂಡಲೇ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಈ ವೇಳೆ ಆವರೆಗೆರೆ ವಾಸು,ವಿ.ಲಕ್ಷ್ಮಣ, ರಾಜು ಕೆರೆನಹಳ್ಳಿ , ಗುರುಮೂರ್ತಿ ಸಿ, ತಿಪ್ಪೇಶ್‍ಹೊನ್ನೂರು, ಎನ್ .ಹೆಚ್ ರಾಮಣ್ಣ, ಮಂಜು.ಡಿ, ಜಯಣ್ಣ, ಕರಿಬಸಪ್ಪ,ಮಂಜುನಾಥ ದೊಡ್ಡಮನಿ, ದೇವರಾಜ ಗೋಶಾಲೆ, ತಂಗವೇಲು, ರಮೇಶ್.ಸಿ, ಹನುಮಂತಪ್ಪ ಕಂಚಿಕೆರೆ, ಚಿನ್ನಪ್ಪ, ಪ್ರಶಾಂತ್, ಪರಶುರಾಮ ಗೊಲ್ಲರಹಳ್ಳಿ ಪ್ರತಿಭಟನೆಯಲ್ಲಿದ್ದರು.

Leave a Comment