ಎಸ್‍ಎಸ್‍ಪಿ ಪೋರ್ಟಲ್‍ನಲ್ಲಿ ಇ-ದೃಢೀಕರಣ ಸೌಕರ್ಯ –ಡಾ.ಬಿ.ಸಿ.ಸತೀಶ

ಧಾರವಾಡ,ನ8- ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯ ವಿಧಾನವನ್ನು ಇ-ಆಡಳಿತ ಇಲಾಖೆಯು ಸರಳೀಕರಣಗೊಳಿಸಿದೆ. ಸ್ಟೇಟ್ ಸ್ಕಾಲರ್‍ಷಿಪ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ವಿದ್ಯಾರ್ಥಿಗಳು ಈ ಹಿಂದೆ ಅರ್ಜಿ ಸಲ್ಲಿಸಿದ ಬಳಿಕ ದೃಢೀಕೃತ ಪ್ರತಿಗಳನ್ನು ಸಲ್ಲಿಸುತ್ತಿದ್ದ ಪದ್ಧತಿ ಕೈಬಿಡಲಾಗಿದೆ. ಪರ್ಯಾಯವಾಗಿ ಇ-ಅಟೆಸ್ಟೇಷನ್ ಸೌಕರ್ಯ ಕಲ್ಪಿಸಲಾಗಿದೆ. ಸಂಬಂಧಿಸಿದ ಕಾಲೇಜು, ವಿಶ್ವವಿದ್ಯಾಲಯ ಮತ್ತಿತರ ಶಿಕ್ಷಣ ಸಂಸ್ಥೆಗಳೇ ನೇರವಾಗಿ ಈ ಕಾರ್ಯನಿರ್ವಹಿಸಬೇಕು ನವೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿಂದು ಈ ಕುರಿತು ಅಪರ ಮುಖ್ಯ ಕಾರ್ಯದಶಿಗಳು ಹಾಗೂ ಅಭಿವೃದ್ಧಿ ಆಯುಕ್ತರೊಂದಿಗೆ ವಿಡಿಯೋ ಸಂವಾದದ ಬಳಿಕ, ಎಸ್‍ಎಸ್‍ಪಿ ಪೋರ್ಟಲ್ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ, ವಿವಿಧ ಇಲಾಖೆಗಳು,ವಿಶ್ವ ವಿದ್ಯಾಲಯಗಳು,ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ,ತಾಂತ್ರಿಕ ಶಿಕ್ಷಣ,ವೈದ್ಯಕೀಯ ಶಿಕ್ಷಣ,ಆಯುಷ್ ಇಲಾಖೆಗಳ ಮೂಲಕ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್ ನೀಡಲಾಗುತ್ತಿದೆ. ಕರ್ನಾಟಕದ ರಹವಾಸಿಯಾಗಿರುವ ,ಆಯಾ ಪ್ರವರ್ಗಗಳಿಗೆ ನಿಗದಿ ಮಾಡಲ್ಪಟ್ಟಿರುವ ವಾರ್ಷಿಕ ಆದಾಯದ ಮಿತಿಯೊಳಗೆ ಆರ್ಥಿಕ ಉತ್ಪನ್ನ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದು. ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಮತ್ತು ಇ-ಅಟೆಸ್ಟೆಷನ್ ಪ್ರಾಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಏರ್ಪಡಿಸಿ ಎಸ್‍ಎಸ್‍ಪಿ ಪೋರ್ಟಲ್ ಬಳಕೆಯ ವಿಧಾನಗಳ ಮಾಹಿತಿ ಒದಗಿಸಲಾಗುವುದು. ಆಧಾರ್ ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳ ಇತ್ತೀಚಿನ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿ ವೇತನ ಜಮೆಯಾಗುವುದು. ಹಾಸ್ಟೇಲ್‍ಗಳಲ್ಲಿ ವಸತಿ ಸೌಕರ್ಯ ಪಡೆದಿರುವ,ಡೇ ಸ್ಕಾಲರ್ ಪಡೆಯುತ್ತಿರುವ ವಿದ್ಯಾರ್ಥಿಗಳೂ ಕೂಡ ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಜಿಲ್ಲೆಯ ಎಲ್ಲಾ ಪದವಿಪೂರ್ವ,ಐಟಿಐ,ಪಾಲಿಟೆಕ್ನಿಕ್, ಜಿಟಿಟಿಸಿ ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಆಯುಷ್, ಔಷಧ ವಿಜ್ಞಾನ, ನರ್ಸಿಂಗ್ ಡಿ.ಎಡ್, ಬಿ.ಎಡ್, ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕುರಿತು ಜಾಗೃತಿ ಮೂಡಿಸಿ ಎಸ್‍ಎಸ್‍ಪಿ ಪೋರ್ಟಲ್ ಮೂಲಕ  ಅರ್ಜಿ ಸಲ್ಲಿಸಲು ತಿಳುವಳಿಕೆ ನೀಡಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶುಲ್ಕವಿನಾಯಿತಿ ನೀಡಿದಾಗ ಯಾವುದೇ ರಸೀದಿಗಳನ್ನು ಕೊಟ್ಟಿರುವುದಿಲ್ಲ, ಆಗ ವಿದ್ಯಾರ್ಥಿಗಳು ಸಂಸ್ಥೆಯ ವ್ಯಾಸಂಗ ಪ್ರಮಾಣ ಪತ್ರವನ್ನು ಪೋರ್ಟಲ್ ಮೂಲಕ ಸಲ್ಲಿಸಬೇಕು, ಅದರ ಆಧಾರದಲ್ಲಿ ವಿದ್ಯಾರ್ಥಿ ವೇತನ ಹಾಗೂ ಶುಲ್ಕಗಳನ್ನು ಬಿಡುಗಡೆ ಮಾಡಲಾಗುವುದು. ಜಿಲ್ಲೆಯ ವಿದ್ಯಾರ್ಥಿಗಳು ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅಂತಹ ವಿದ್ಯಾರ್ಥಿಗಳು ಮಾತ್ರ ಖುದ್ದಾಗಿ ಮುದ್ರಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಡಾ.ಬಿ.ಸಿ.ಸತೀಶ ಅಧಿಕಾರಿಗಳಿಗೆ ಸೂಚಿಸಿದರು.
ಇ-ಅಟೆಸ್ಟೆಷನ್;  ವಿದ್ಯಾರ್ಥಿಗಳು ಈ ಹಿಂದೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ದಾಖಲೆಗಳ ಮುದ್ರಿತ ಪ್ರತಿಗಳನ್ನು ದೃಢೀಕರಿಸಿ ಸಲ್ಲಿಸಬೇಕಾಗುತ್ತಿತ್ತು. ಈಗ ಪದ್ಧತಿ ಸರಳಗೊಳಿಸಲಾಗಿದ್ದು https://ssp.karnataka.gov.in  ಅಂತರ್ಜಾಲ ವಿಳಾಸಕ್ಕೆ ಭೇಟಿ ನೀಡಿ, ಆಯಾ ಶಿಕ್ಷಣ ಸಂಸ್ಥೆಗಳಲ್ಲಿರುವ ಇ-ಅಟೆಸ್ಟೆಷನ್ ಪ್ರಾಧಿಕಾರಿಗಳ ಮೂಲಕ ವ್ಯಾಸಂಗ ಪ್ರಮಾಣ ಪತ್ರ, ಶುಲ್ಕ ರಸೀದಿ,ಹಾಸ್ಟೇಲ್ ವಸತಿ ಪ್ರಮಾಣ ಪತ್ರ,ಅಂಕ ಪಟ್ಟಿಗಳು, ಆದಾಯ ಪ್ರಮಾಣ ಪತ್ರ ಮತ್ತು ,ರಕ್ಷಣಾ ಸಿಬ್ಬಂದಿಗಳ ಮಕ್ಕಳ ಪ್ರಮಾಣ ಪತ್ರಗಳನ್ನು  ಶಿಕ್ಷಣ ಸಂಸ್ಥೆಯ ಕಂಪ್ಯೂಟರ್ ಕೇಂದ್ರಗಳ ಮೂಲಕವೇ ಆನ್‍ಲೈನ್‍ನಲ್ಲಿ ದೃಢೀಕರಿಸಿ ಕಳಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ; https://ssp.karnataka.gov.in  ಅಂತರ್ಜಾಲ ವಿಳಾಸಕ್ಕೆ ಭೇಟಿ ನೀಡಿ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರಿನೊಂದಿಗೆ ಎಸ್‍ಎಸ್‍ಪಿ ಖಾತೆ ಸೃಜಿಸಬೇಕು. ಕಾಲೇಜು ಮತ್ತು ಕೋರ್ಸು ವಿವರ ಆಯ್ಕೆ ಮಾಡಿಕೊಂಡು, ಪಾಲಕರ ಆಧಾರ್ ಸಂಖ್ಯೆಗಳನ್ನು ದಾಖಲಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆರ್.ಡಿ.ಸಂಖ್ಯೆಗಳನ್ನು ನಮೂದಿಸಬೇಕು. ಇ ಅಟೆಸ್ಟೆಷನ್ ದಾಖಲೆಗಳ ಸಂಖ್ಯೆ ನಮೂದಿಸಬೇಕು. ವೆಬ್‍ಸೈಟಿನಲ್ಲಿ ಅರ್ಜಿ ಸಲ್ಲಿಕೆಯ ವಿಧಾನದ ವಿಡಿಯೋ ಚಿತ್ರಣ ಮತ್ತು ಪ್ರಶ್ನಾವಳಿಗಳನ್ನು ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ನೀಡಲಾಗಿದೆ. ಅರ್ಜಿ ಹಾಕುವ ಮುನ್ನ ದಾಖಲೆ ಪತ್ರಗಳನ್ನು ಇ ಅಟೆಸ್ಟೆಷನ್ ಮಾಡಿಸಿಕೊಂಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಪರ್ಕ ಕಲ್ಪಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 080-44554455 ಸಂಪರ್ಕಿಸಬಹುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಡಯಟ್ ಪ್ರಾಚಾರ್ಯ ಎ.ಎ.ಖಾಜಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ್ ಶಿಂತ್ರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಬ್ದುಲ್‍ರಶೀದ್ ಮಿರ್ಜಣ್ಣವರ್ ಸೇರಿದಂತೆ ವಿಶ್ವವಿದ್ಯಾಲಯಗಳ ಕುಲಸಚಿವರು,  ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment