ಎಸ್‌ಟಿಪಿ ದುರಂತ:ವರದಿ ನಂತರ ಕ್ರಮ

ಬೆಂಗಳೂರು, ಜೂ.೧೯- ಇತ್ತೀಚೆಗೆ ನಗರದ ಹೆಬ್ಬಾಳದಲ್ಲಿ ನಡೆದ ಎಸ್‌ಟಿಪಿ ದುರಂತ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಅವರಿಂದು ಹೆಬ್ಬಾಳದ ಎಸ್‌ಟಿಪಿ ದುರಂತದ ಸ್ಥಳಕ್ಕೆ ಭೇಟಿ ನೀಡಿ,ದುರ್ಘಟನೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಅವರು, ಹೆಬ್ಬಾಳದಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಟಿಪಿ ಎರಡನೇ ಅತಿ ದೊಡ್ಡ ಎಸ್‌ಟಿಪಿ ಆಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಎಲ್ಲಾ ರೀತಿಯ ನಿರ್ದೇಶನ ನೀಡಲಾಗಿತ್ತು. ಈ ಅವಧಿಯಲ್ಲಿ ಇಂಥ ಘಟನೆ ನಡೆದಿದ್ದು ಬೇಸರ ತರಿಸಿದೆ ಎಂದರು.
ಈ ಘಟನೆಗೆ ಏನು ದೋಷವಾಗಿದೆ ಎಂಬುದು ತನಿಖೆಯಿಂದಲೇ ಸತ್ಯ ತಿಳಿಯಲು ಸಾಧ್ಯ. ತನಿಖೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ಹಾಗೂ ಕೇಂದ್ರದ ಇಲಾಖೆಯಿಂದಲೂ ತಾಂತ್ರಿಕ ದೋಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಇದರ ಜೊತೆಗೆ ಇಲಾಖೆಯಿಂದಲೂ ಸಹ ತನಿಖೆಗೆ ಸೂಚಿಸಲಾಗಿದೆ. ಆ ದಿನ ಯಾರೆಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ, ಯಾಕೆ ಮುಂಜಾಗೃತಿ ತೆಗೆದುಕೊಂಡಿಲ್ಲ , ಈ ಬೇಜವಾಬ್ದಾರಿಗೆ ಯಾರು ಹೊಣೆ ಈ ಎಲ್ಲಾ ಅಂಶಗಳನ್ನು ಸಹ ಇಲಾಖೆ ಒಳಗೆ ತನಿಖೆ ಮಾಡಲಾಗುವುದು. ಇಂಥ ಘಟನೆ ಎಂದೂ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಎಸ್‌ಟಿಪಿ ನಿರ್ಮಾಣದ ಹಂತದ ವೇಳೆ ಮೂರು ಜನ ಇಂಜಿನಿಯರ್ ಗಳು ಸಾವನ್ನಪ್ಪಿರುವ ಘಟನೆ ಅತ್ಯಂತ ದುರದೃಷ್ಟಕರ. ಅವರ ಆತ್ಮಕ್ಕೆ ಶಾಂತಿ ದೊರೆಯಲಿದೆ. ಅವರ ಕುಟುಂಬ ವರ್ಗಕ್ಕೆ ಇಲಾಖೆಯಿಂದ ಪರಿಹಾರ ನೀಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನುಡಿದರು.

Leave a Comment