ಎಸ್‌ಎಸ್ಎಲ್‌ಸಿ ಅಂಕಪಟ್ಟಿ ವಿಳಂಬ ವಿದ್ಯಾರ್ಥಿಗಳ ಆತಂಕ

ಬೆಂಗಳೂರು, ಸೆ. ೫- ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದು 3 ತಿಂಗಳ ಕಳೆದರೂ ಅಂಕಪಟ್ಟಿ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಬಂದ ಹದಿನೈದು ದಿನಗಳ ಒಳಗೆ ಅಂಕಪಟ್ಟಿ ವಿದ್ಯಾರ್ಥಿಗಳನ್ನು ತಲುಪುತ್ತಿತ್ತು. ಆದರೆ ಈ ಬಾರಿ ಮೂರು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿ ವಿತರಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಮಸ್ಯೆ ಅನುಭವಿಸಬೇಕಾಗಿದೆ.
ಡಿಜಿಟಲ್ ಲಾಕರ್‌ನಲ್ಲಿ ಅಂಕಪಟ್ಟಿಗಳನ್ನು ಪ್ರಕಟಿಸುವುದಾಗಿ ಪ್ರೌಢ ಶಿಕ್ಷಣ ಇಲಾಖೆ ಪ್ರಕಟಿಸಿದರೂ ವಿದ್ಯಾರ್ಥಿಗಳಿಗೆ ಮೂಲ ಅಂಕಪಟ್ಟಿ ಸಿಕ್ಕಿಲ್ಲ. ಡಿಜಿಟಲ್ ಲಾಕರ್‌ಗೆ ನೋಂದಣಿ ಮಾಡಿಕೊಳ್ಳಲು ಫೋನ್ ನಂಬರ್ ನೀಡಿದರೆ ಅದಕ್ಕೆ ಒಟಿಪಿ ಬರುತ್ತಿಲ್ಲ. ಬದಲಿಗೆ ಈ ದೂರವಾಣಿ ಸಂಖ್ಯೆಗೆ ಜೋಡಣೆಯಾಗಿಲ್ಲ ಎಂಬ ಸಂದೇಶ ಬರುತ್ತದೆ ಎಂದು ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಸಾಕಷ್ಟು ತೊಂದರೆ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹಾಗೂ ಪಿಯು ಕಾಲೇಜುಗಳಿಗೆ ಪ್ರವೇಶಾತಿಯ ದಾಖಲೆಯಾಗಿ ನೀಡಲು ಸದ್ಯ ತುರ್ತಾಗಿ ಅಂಕಪಟ್ಟಿಯ ಅಗತ್ಯವಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಒರಿಜಿನಲ್ ಅಂಕಪಟ್ಟಿ ಕಳುಹಿಸಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಂಕಪಟ್ಟಿ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕಾಗಿದೆ.

Leave a Comment