ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾವಿತ್ರ್ಯತೆ ಕಾಪಾಡಿ. ಸುರೇಶ್ ಸೂಚನೆ

ತುಮಕೂರು, ಮೇ ೩೧- ಕೊರೊನಾ ಮಹಾಮಾರಿ ಶಿಕ್ಷಣ ಇಲಾಖೆ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪಾವಿತ್ರ್ಯತೆಗೆ ಯಾವುದೇ ರೀತಿಯ ಕುಂದು ಬಾರದಂತೆ ನಡೆಸಲು ಶಿಕ್ಷಣ ಇಲಾಖೆ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಇಂದಿಲ್ಲಿ ಸೂಚನೆ ನೀಡಿದರು.

ರಾಜ್ಯದಲ್ಲಿ 8,48,200 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಇಷ್ಟು ಮಕ್ಕಳು ಪರೀಕ್ಷೆ ಬರೆಯುವುದು ಸಾಹಸದ ಸಂಗತಿ. ಹಾಗಾಗಿ ಪರೀಕ್ಷೆಯ ಪಾವಿತ್ರ್ಯತೆಗೆ ಕುಂದು ಬಾರದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಹಂತದಲ್ಲೂ ಕೂಡಾ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ತಾಕೀತು ಮಾಡಿದರು.

ಶಿಕ್ಷಣ ಇಲಾಖೆಗೆ ಪರೀಕ್ಷೆಗೆ ಸನ್ನದ್ಧವಾಗಿ ನಿಂತಿದೆ. ಮುಂದೆ ಅನೇಕ ವರ್ಷಗಳಿಗೆ ನೆನಪಿಟ್ಟುಕೊಳ್ಳುವಂತಹ ಪರೀಕ್ಷೆ ಇದಾಗಬೇಕು. ಯಾವುದೇ ರೀತಿಯ ಕೊರತೆಯಾಗದಂತೆ ಪರೀಕ್ಷೆ ನಡೆಸುವುದು ಡಿಡಿಪಿಐಗಳ ಹೊಣೆ ಎಂದು ಅವರು ಹೇಳಿದರು.

ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ದತಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಶಾಸಕರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಪೂರ್ಣವಾದ ಸಹಕಾರ ಕೊಡಲು ಸಿದ್ದರಿದ್ದಾರೆ. ಸಂಘ ಸಂಸ್ಥೆಗಳು ಸಹ ಸಿದ್ದವಾಗಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅವಘಡವಾಗದಂತೆ, ಯಾವುದೇ ಸುದ್ದಿಗೆ ಆಹಾರವಾಗದೆ ಆರೋಗ್ಯಕರವಾಗಿ ಮಕ್ಕಳು ಲವಲವಿಕೆಯಿಂದ ಬರೆಯುವ ಪರೀಕ್ಷೆ ಆಗಬೇಕು. ಇದಕ್ಕೆ ಎಲ್ಲರ ಸಹಕಾರ, ಸಂಪೂರ್ಣ ಪಾಲ್ಗೊಳ್ಳುವಿಕೆ ಅಗತ್ಯ ಎಂದರು.

ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಜಾಸ್ತಿ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಬೇರೆ ಬೇರೆ ರೀತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಬೇಕು ಎಂದು ಸಲಹೆ ಮಾಡಿದರು.
ಈಗಾಗಲೇ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪುನರ್ ಮನನ ತರಗತಿ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಪರೀಕ್ಷೆ ನಡೆಯುವ 8 ದಿನಗಳ ಕಾಲ ಪರೀಕ್ಷಾ ಕೇಂದ್ರಗಳ ಸ್ವಚ್ಚತೆ ಸಂಬಂಧ ನಗರ ಪಾಲಿಕೆ, ನಗರಸಭೆ, ಪುರಸಭೆಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜತೆಗೆ ಮಕ್ಕಳು ಮನೆಯಿಂದಲೇ ನೀರು ತರುವಂತೆಯೂ ಸಹ ಸಲಹೆ ಮಾಡಬೇಕು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮಕ್ಕಳಿಗೆ ಕುಳಿತಲ್ಲಿಗೇ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದರು.

ಪರೀಕ್ಷಾ ಕೇಂದ್ರದ ಒಳಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ಹಿಂದೆ ಒಂದು ಕೊಠಡಿ ಸಾಮಾನ್ಯವಾಗಿ 24 ಮಕ್ಕಳನ್ನು ಪರೀಕ್ಷೆ ಬರೆಯಲು ನಿಗದಿಪಡಿಸಲಾಗುತ್ತಿತ್ತು. ಆದರೆ ಈಗ 20 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 20 ಮಕ್ಕಳಿಗೆ ಒಬ್ಬರು ಸೂಪರ್‌ವೈಸರ್ ಹಾಕಲಾಗುವುದು ಎಂದರು.

ಪರೀಕ್ಷಾ ಕೆಲಸಕ್ಕೆ ಹಾಜರಾಗುವ ಸೂಪರ್‌ವೈಸರ್ ಸ್ಯಾನಿಟೈಸರ್, ಮಾಸ್ಕ್‌ನ್ನು ಕಡ್ಡಾಯವಾಗಿ ಬಳಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಸುರಕ್ಷತೆಯಿಂದ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಕ್ಕಳು ಸ್ವತಃ ತಾವೇ ತಯಾರಿಸಿರುವ ಎಂಟೂವರೆ ಲಕ್ಷ ಮಾಸ್ಕ್‌ನ್ನು ನೀಡಿದ್ದಾರೆ. ಈ ಮಾಸ್ಕ್ ಹಿಂದೆ ಈ ಮಕ್ಕಳ ಪ್ರೀತಿ, ಶ್ರಮ, ಶ್ರದ್ಧೆ ಇದೆ. ಜತೆಗೆ ಇನ್ನು ಬಹಳಷ್ಟು ಸಂಸ್ಥೆಗಳು ಸಹ ಮಾಸ್ಕ್ ಕೊಡುಗೆಯಾಗಿ ನೀಡುತ್ತಿವೆ ಎಂದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸ್ಕೌಟ್ಸ್ ಮಕ್ಕಳು ಸಮವಸ್ತ್ರದಲ್ಲಿ ಇರುತ್ತಾರೆ. ಪರೀಕ್ಷೆ ಬರೆಯುವ ಮಕ್ಕಳ ಸಹಾಯಕ್ಕಾಗಿ ಹೊರಗೆ ಕಾರ್ಯನಿರ್ವಹಿಸುತ್ತಾರೆ ಎಂದರು.

ಜೂ. 8 ರಿಂದ ಹೋಟೆಲ್, ಮಾಲ್, ದೇವಸ್ಥಾನ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಶಾಲಾ-ಕಾಲೇಜು ತೆರೆಯಲು ಮಾತ್ರ ಅವಕಾಶ ನೀಡಿಲ್ಲ. ಪರೀಕ್ಷೆ ನಡೆಸಲು ಮಾತ್ರ ಹಸಿರು ನಿಶಾನೆ ತೋರಿದ್ದಾರೆ. ಹಾಗಾಗಿ ಬಹಳ ಮುನ್ನೆಚ್ಚರಿಕೆಯಿಂದ ನಾವು ಪರೀಕ್ಷೆ ನಡೆಸಬೇಕಾಗಿದೆ ಎಂದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಮನೆಯಿಂದಲೇ ಕೆಲಸ ಎಂಬಂತೆ ಈಗ ಮಕ್ಕಳಿಗೂ ಮನೆಯಿಂದಲೇ ಕಲಿಕೆ ಎಂಬ ಹೊಸ ನೀತಿ ಜಾರಿಗೆ ಬರುತ್ತಿದೆ. ಈ ಬಗ್ಗೆ ನಮಗಿನ್ನೂ ಸೂಕ್ತ ನಿರ್ದೇಶ ಬಂದಿಲ್ಲ. ಮುಂದಿನ ದಿನಗಳಲ್ಲಿ ಬರಲಿದೆ ಎಂದರು.
ಸಭೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿ.ಪಂ. ಸಿಇಓ ಶುಭಕಲ್ಯಾಣ್, ಡಿಡಿಪಿಐ ಕಾಮಾಕ್ಷಿ, ಮಧುಗಿರಿ ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Share

Leave a Comment