ಎಸ್ಸಿ ಎಸ್ಟಿ ನೌಕರರಿಗೆ ಬಡ್ತಿ: ಯಥಾಸ್ಥಿತಿಗೆ ಸುಪ್ರೀಂ ಆದೇಶ

ನವದೆಹಲಿ, ಏ. ೧೬: ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟರ ಜಾತಿ/ವರ್ಗದ ನೌಕರರಿಗೆ ನೀಡುವ ಬಡ್ತಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡಯಾಜ್ಞೆ ನೀಡಿದೆ. ಈ ಜನಾಂಗದ ನೌಕರರ ಪ್ರಾತಿನಿಧ್ಯಕ್ಕೆ ಅಗತ್ಯ ಪ್ರಮಾಣದ ಅಂಕಿಅಂಶ ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾದ ನಂತರ ಸುಪ್ರೀಂ ಕೊರ್ಟ್ ಈ ಆದೇಶ ನೀಡಿದೆ.
ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಮತ್ತು ಇತರರು ಸಲ್ಲಿಸಿರುವ ಒಟ್ಟಾರೆ ೮೪ ಅರ್ಜಿಗಳ ಗುಚ್ಛವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ ಮತ್ತು ಅಬ್ದುಲ್ ನಜೀರ್ ಒಳಗೊಂಡ ಪೀಠವು, ಬಡ್ತಿ ಮೀಸಲಾತಿ ವಿಷಯವಾಗಿ ತಾನು ಅಂತಿಮ ನಿರ್ಧಾರ ಪ್ರಕಟಿಸುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ನಿರ್ದೇಶನ ನೀಡಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐವರು ಸದಸ್ಯರ ಸಾಂವಿಧಾನಿಕ ಪೀಠವು ನೀಡಿದ್ದ ನಿರ್ದೇಶನದ ಪ್ರಕಾರ, ಬಡ್ತಿ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ನಿಜ; ಆದರೆ “ಕೆನೆಪದರ ಹೊರತುಪಡಿಸಿದ” (ಕ್ರಿಮಿಲೇಯರ್ ಎಕ್ಸ್‌ಕ್ಲೂಷನ್) ನೀತಿ ಎಂಬುದು ಇತರ ಹಿಂದುಳಿದ ವರ್ಗಗಳಿಗೆ ಹೇಗೆ ಅನ್ವಯವಾಗುವುದೋ ಅದೇ ನೀತಿ ಎಸ್ಸಿ, ಎಸ್ಟಿಗಳಿಗೂ ಅನ್ವಯವಾಗಬೇಕು ಎಂದು ಆದೇಶಿಸಲಾಗಿತ್ತು. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯ ಒದಗಿಸುವ ಉದ್ದೇಶದಿಂದ ತಾನು ನೀಡಿದ್ದ ೨೦೧೬ರ ತೀರ್ಪು ಸರಿಯಾದುದಾಗಿದ್ದು, ಹಾಲಿ ಪರಿಸ್ಥಿತಿಗೆ ಅನುಗುಣವಾಗಿ ಈ ಜನಾಂಗದ ನೌಕರರ ಪ್ರಾತಿನಿಧ್ಯಕ್ಕೆ ಅಗತ್ಯ ಪ್ರಮಾಣದ ಅಂಕಿಅಂಶ ಪೂರೈಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಬಡ್ತಿ ಮೀಸಲಾತಿ ನೀಡುವ ಮುನ್ನ, ಅಂತಹ ಕ್ರಮ ಆಡಳಿತ ದಕ್ಷತೆ ಮೇಲೆ ಪರಿಣಾಮ ಬೀರುವುದೋ ಇಲ್ಲವೋ ಎಂಬ ಕುರಿತು ಅಧ್ಯಯನ ನಡೆಸುವ ಅಗತ್ಯವಿದೆ ಎಂದೂ ನ್ಯಾಯಾಲಯ ಹೇಳಿದೆ.
ಈ ಮುನ್ನ ಸುಪ್ರೀಂ ಕೋರ್ಟ್ ನಾಗರಾಜ್ ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಹಿಂದುಳಿದಿರುವಿಕೆ ಕುರಿತು ಅಗತ್ಯ ಪ್ರಮಾಣದ ಅಂಕಿಅಂಶ ಪೂರೈಸುವಿಕೆಯಿಂದ ರಾಜ್ಯ ಸರ್ಕಾರಗಳನ್ನು ಹೊರಗಿಟ್ಟಿತ್ತು.

Leave a Comment