ಎಸ್ಪಿ ಹುಟ್ಟು ಹಬ್ಬ ಅಂಗವಾಗಿ ರಸ್ತೆ ಗುಂಡಿ ಮುಚ್ಚಿದ ಸಂಚಾರಿ ಪೊಲೀಸ್

ರಾಯಚೂರು.ಅ.16- ರಸ್ತೆ ಅತಿಕ್ರಮಣ, ಸಂಚಾರ ವ್ಯವಸ್ಥೆ ಹಾಗೂ ಬಿಡಾಡಿ ದನಗಳ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರ ಹುಟ್ಟು ಹಬ್ಬ ನಗರದ ರಸ್ತೆಗಳ ಗುಂಡಿ ಮುಚ್ಚಲು ನೆರವಾಗಿರುವುದು ಗಮನಾರ್ಹವಾಗಿದೆ.
ಎಸ್ಪಿ ಅವರ ಹುಟ್ಟು ಹಬ್ಬ ಅಂಗವಾಗಿ ಇಂದು ಸಂಚಾರಿ ಠಾಣೆಯ ಪೊಲೀಸರು ಕನಕದಾಸ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗಿನ ರಸ್ತೆಯಲ್ಲಿದ್ದ ಗುಂಡಿಗಳನ್ನು ಪೊಲೀಸ್ ವಸ್ತ್ರದಲ್ಲಿಯೇ ಮುಚ್ಚುವ ಮೂಲಕ ಮತ್ತೊಂದು ಮಾದರಿಯ ಕೆಲಸ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿಗಳು ಬಿದ್ದಿದ್ದರೂ, ಜನ ಯಥಾರೀತಿ ಸಂಚರಿಸುತ್ತಿದ್ದರು. ಇದರಿಂದ ರಸ್ತೆ ಸಂಚಾರ ಜನರ ಪಾಲಿಗೆ ನರಕವಾಗಿತ್ತು.
ನಗರಸಭೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪದೇ ಪದೇ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಒತ್ತಾಯಿಸಿದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹುಟ್ಟು ಹಬ್ಬಕ್ಕೆ ಸಂಚಾರಿ ಠಾಣೆಯ ಪೊಲೀಸರು ಒಂದಷ್ಟು ಗುಂಡಿಗಳನ್ನು ಮುಚ್ಚಲು ಮುಂದಾಗಿರುವುದು ನಾಗರೀಕರಲ್ಲಿ ಸಮಾಧಾನ ತಂದಿದೆ. ಆದರೆ, ನಗರದ ಎಲ್ಲಾ ರಸ್ತೆಗಳಲ್ಲಿರುವ ಗುಂಡಿಗಳನ್ನು ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಮುಚ್ಚುವ ಮೂಲಕ ನಾಗರೀಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಗುಂಡಿ ಮುಚ್ಚುವ ಸೇವೆಯಲ್ಲಿ ಪಿಎಸ್ಐ ಅಮರಪ್ಪ ಶಿವಬಾಲ, ಆಂಜಿನೇಯ್ಯ, ವೆಂಕಟೇಶ, ಶಂಕರಗೌಡ, ನರಸಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Comment