ಎಸ್ಪಿ-ಬಿಎಸ್‌ಪಿಯಿಂದ ಕಾಂಗ್ರೆಸ್ ನಿರ್ಲಕ್ಷ್ಯ- ಅಪಾಯಕಾರಿ ತಪ್ಪು

ನವದೆಹಲಿ, ಜ. ೧೨- ನಮ್ಮನ್ನು ಕಡೆಗಣಿಸಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಜತೆಗೂಡಿ ಮಹಾಮೈತ್ರಿ ರಚನೆ ಮಾಡಿಕೊಂಡಿರುವುದು ‘ಅತ್ಯಂತ ಅಪಾಯಕಾರಿ ತಪ್ಪು’ ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ದೆಹಲಿಯಲ್ಲಿ ಪ್ರತಿಕ್ರಿಯಿಸಿ ಕೇಂದ್ರದಲ್ಲಿನ ಬಿಜೆಪಿ ದುರಾಡಳಿತವನ್ನು ಕೊನೆಗಾಣಿಸಲು ಎಲ್ಲಾ ವಿರೋಧ ಪಕ್ಷಗಳೂ ಒಗ್ಗೂಡಬೇಕು ಎಂಬ ಆಶಯ ತಮ್ಮದಾಗಿತ್ತು. ಅದಕ್ಕೆ ವಿರುದ್ಧವಾಗಿ ಬಿಎಸ್‌ಪಿ ಮತ್ತು ಎಸ್.ಪಿ. ನಾಯಕರು ತೀರ್ಮಾನ ಕೈಗೊಂಡಿದ್ದಾರೆಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ ವಕ್ತಾರ ರಾಜೀವ್ ಬಕ್ಷಿ ಪ್ರತಿಕ್ರಿಯಿಸಿ ಉತ್ತರ ಪ್ರದೇಶದಲ್ಲಿ ಎದುರಾಗಲಿರುವ ಚುನಾವಣೆಗಳನ್ನು ಏಕಾಂಗಿಯಾಗಿ ಸ್ಪರ್ಧಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ನಾವು 45 ಸ್ಥಾನಗಳನ್ನು ಹೊಂದಿದ್ದೇವೆ, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅನ್ನು ಜತೆಗಿಟ್ಟುಕೊಂಡು ಮಹಾಮೈತ್ರಿಕೂಟ ರಚನೆ ಮಾಡಿಕೊಳ್ಳಬೇಕಿತ್ತು ಎಂದು ಬಕ್ಷಿ ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟ ರಚಿಸಿಕೊಳ್ಳಲು ತೀರ್ಮಾನಿಸಿರುವ ಬಿಎಸ್‌ಪಿ ಮತ್ತು ಎಸ್.ಪಿ. ನಾಯಕರು, ಕಾಂಗ್ರೆಸ್ ಪಕ್ಷಕ್ಕೆ ಎರಡು ಸ್ಥಾನಗಳನ್ನು ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುವ ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಮಹಾಮೈತ್ರಿಕೂಟ ತೀರ್ಮಾನಿಸಿದೆ.

Leave a Comment