ಎಸ್ಎಸ್ಐಟಿ ಕಾಲೇಜಿನ ಮೇಲೆ ಐಟಿ ದಾಳಿ

ತುಮಕೂರು, ಅ. ೧೦- ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಒಡೆತನದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮೇಲೆ ಬೆಳ್ಳಂಬೆಳಿಗ್ಗೆ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ನಗರದ ಕುಣಿಗಲ್ ರಸ್ತೆಯ ಮರಳೂರಿನಲ್ಲಿರುವ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮೇಲೆ ಬೆಳ್ಳಂಬೆಳಿಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಕಾಲೇಜಿನ ಕಚೇರಿಯ ಒಳಗೆ ಪ್ರವೇಶಿಸಿ ಬಾಗಿಲು ಮತ್ತು ಕಿಟಕಿಗಳನ್ನು ಹಾಕಿಕೊಂಡು ವಿದ್ಯಾಲಯಕ್ಕೆ ಸಂಬಂಧಿಸಿದ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದೆ.

ಬೆಳಿಗ್ಗೆ 8.30ಕ್ಕೆ ಬೆಂಗಳೂರಿನ ಐಟಿ ಸೆಲ್ ನೇತೃತ್ವದಲ್ಲಿ  ಆದಾಯ ತೆರಿಗೆ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ಇಂಜಿನಿಯರಿಂಗ್, ಪದವಿ ಕಾಲೇಜುಗಳ ಕಚೇರಿಗಳಲ್ಲಿ ದಾಖಲಾತಿಗಳ ತಪಾಸಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಸುಮಾರು 10 ಅಧಿಕಾರಿಗಳ ತಂಡ ಎಸ್ಎಸ್ಐ ಕಾಲೇಜಿನಲ್ಲಿ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದು, ಇಂದು ಮಧ್ಯಾಹ್ನದ ನಂತರ ಐಟಿ ದಾಳಿಯ ನಿಖರ ಮಾಹಿತಿ ತಿಳಿಯಲಿದೆ.

ಕಾಲೇಜಿನ ಕಚೇರಿಗಳ ಬಾಗಿಲು-ಕಿಟಕಿ‌ಗಳನ್ನು ಬಂದ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಸಂಜೆವರೆಗೂ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಪರಮೇಶ್ವರ್ ಹೇಳಿಕೆ

ನಮ್ಮ ಸಂಸ್ಥೆ ಮೇಲೆ ಆದಾಯ ತೆರಿಗೆ ದಾಳಿ ನಡೆಸಿರುವುದು ಸಂತೋಷಕರ ವಿಚಾರ. ನಮ್ಮಲ್ಲಿ ತಪ್ಪುಗಳಿದ್ದರೆ ದಾಳಿ ಮಾಡಲಿ. ಇದರಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಐಟಿ ದಾಳಿ ಬಗ್ಗೆ ನನಗೇನು ಮಾಹಿತಿ ಇಲ್ಲ. ಈಗ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲಾತಿಗಳನ್ನು ಪರಿಶೀಲಿಸುವ ಮೂಲಕ ತಮ್ಮ ಕರ್ತವ್ಯವನ್ನು ಅವರು ಮಾಡುತ್ತಿದ್ದಾರೆ ಎಂದರು.

Leave a Comment