ಎಸಿ ಕಚೇರಿ ವಸ್ತುಗಳ ಜಪ್ತು

ಧಾರವಾಡ,ಡಿ7: ಭೂಸ್ವಾಧೀನಪಡಿಸಿಕೊಂಡ ರೈತನಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಇಂದು ಉಪವಿಭಾಗಾಧಿಕಾರಿ ಕಚೇರಿ ಜಪ್ತಿ ಮಾಡಲಾಯಿತು.
ಹುಬ್ಬಳ್ಳಿ ತಾಲೂಕು ಸುತಗಟ್ಟಿ ಗ್ರಾಮದ ರೈತ ಗುರುಪಾದಯ್ಯ ಸಿದ್ಧಯ್ಯ ಯಡಳ್ಳಿ ಎಂಬ ರೈತನಿಗೆ 12,4013 ರೂಪಾಯಿ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪವಿಭಾಗಾಧಿಕಾರಿ ವಾಹನ, ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿದರು.]
1989 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ವಸತಿ ಸೌಲಭ್ಯ ಒದಗಿಸುವ ಸಲುವಾಗಿ ಸುತಗಟ್ಟಿ ಗ್ರಾಮದ ಗುರುಪಾದಯ್ಯ ಯಡಳ್ಳಿ ಜಮೀನು ಸೇರಿದಂತೆ ಒಟ್ಟು 19 ಎಕರೆ 28 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಬಳಿಕ ರೈತರಿಗೆ ಉಪವಿಭಾಗಾಧಿಕಾರಿ ಕಚೇರಿ ಪರಿಹಾರ ಕೂಡಾ ವಿತರಿಸಿತ್ತು. ಈ ಮಧ್ಯೆ ಸರ್ಕಾರಿ ನೌಕರರ ಸಹಕಾರಿ ಸಂಘ ದಿವಾಳಿ ಆದ ಕಾರಣ ನಿವೇಶನ ಮಾರಾಟ ಆಗದ ಕಾರಣ ಪರಿಹಾರ ಮೊತ್ತ ಜಮೆ ಆಗಿರಲಿಲ್ಲ. ಅಲ್ಲದೇ ರೈತ ಗುರುಪಾದಯ್ಯ ಯಡಳ್ಳಿ ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರ ರೈತನಿಗೆ 12,4013 ರೂಪಾಯಿ ಪರಿಹಾರ ನೀಡಲು ನಿರ್ದೇಶನ ನೀಡಿತ್ತು. ಆದರೆ ಉಪವಿಭಾಗಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಎರಡನೇ ಅಧಿಕ ಹಿರಿಯ ದಿವಾಣಿ ನ್ಯಾಯಾಲಯವು ಕಳೆದ ದಿ.24 ರಂದು ಕಚೇರಿ ಆಸ್ತಿ ಮುಟ್ಟುಗೋಲಿಗೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪವಿಭಾಗಾಧಿಕಾರಿ ವಾಹನ, ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಜಿದಾರರ ಪರ ನ್ಯಾಯವಾದಿ ಪಿ.ಎಚ್.ನೀರಲಕೇರಿ, ಕಳೆದ 15 ವರ್ಷಗಳಿಂದ ಉಪವಿಭಾಗಾಧಿಕಾರಿಗಳು ಪರಿಹಾರ ನೀಡಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದಿಂದ ಅಗತ್ಯ ನಿರ್ದೇಶನ ಕೊಡಿಸಲಾಗಿದೆ. ಅದರಂತೆ ಇಂದು ಅಧಿಕಾರಿಗಳು ಮತ್ತು ಸಿಬ್ಬಂದಿ ಉಪವಿಭಾಗಾಧಿಕಾರಿ ವಾಹನ, ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಮಾತನಾಡಿ, ಸ್ವಾಧಿನಪಡಿಸಿಕೊಂಡ ಭೂಮಿಯ ರೈತನಿಗೆ ಎಲ್ಲ ಪರಿಹಾರ ನೀಡಲಾಗಿದೆ.ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ಸಹ ತರಲಾಗಿದೆ.ರೈತ  ಗುರುಪಾದಯ್ಯ ಯಡಳ್ಳಿ ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಮಧ್ಯೆ ವಸತಿ ಸೌಲಭ್ಯಕ್ಕೆ ಭೂಮಿ ಪಡೆದ ಸಂಸ್ಥೆ ದಿವಾಳಿಯಾಗಿದೆ. ಇದರಿಂದ ಪರಿಹಾರದ ಮೊತ್ತ ಜಮೆ ಆಗಿಲ್ಲ. ಆದಷ್ಟು ಶೀಘ್ರದಲ್ಲಿ ಪರಿಹಾರ ಮೊತ್ತ ನೀಡುವುದಾಗಿ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಕರ್ಜಗಿ ತಿಳಿಸಿದರು.

Leave a Comment