ಎಲ್ಲ ವಾರ್ಡ್‌ಗಳಿಗೂ ಆದ್ಯತೆ ನೀಡಿ: ಸಚಿವ ಜಯಚಂದ್ರ

ಸಿರಾ, ಅ. ೧೨- ಹಿಂದೆ ಎರಡು ಹಂತದ ನಗರೋತ್ಥಾನದಲ್ಲಿ ಬಿಟ್ಟು ಹೋಗಿದ್ದ ವಾರ್ಡ್‌ಗಳಿಗೆ ಆದ್ಯತೆ ನೀಡುವಂತೆ ಹಾಗೂ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಯೋಜನೆ ರೂಪಿಸಿ ಎಂದು ಸಚಿವ ಜಯಚಂದ್ರ ಸಲಹೆ ನೀಡಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಗರೋತ್ಥಾನ 3ನೇ ಹಂತದ ಕುರಿತ ವಿಶೇಷ ಸಭೆ ನಡೆಸಿದ ಅವರು, ಅಧಿಕಾರಿಗಳು ಮತ್ತು ಸದಸ್ಯರಿಗೆ ಅಗತ್ಯ ಸೂಚನೆ ನೀಡಿದರು.

ನಗರಸಭೆಯಲ್ಲಿ ಸಭೆಗಳನ್ನೇ ನಡೆಸದ ಬಗ್ಗೆ ತಕರಾರು ಸಲ್ಲಿಸಿದ ಸದಸ್ಯ ಎಸ್.ಜೆ. ರಾಜಣ್ಣ ತಿಂಗಳಿಗೊಮ್ಮೆ ಸಭೆ ಕರೆಯಲು ಅಧ್ಯಕ್ಷರಿಗೆ ಸೂಚನೆ ನೀಡುವಂತೆ ಸಚಿವರನ್ನು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಸಚಿವರು ಮೊದಲೇ ಸಮಸ್ಯೆ ಹೆಚ್ಚಿರುವ ಊರು, ಸಮನ್ವಯತೆ ಇಲ್ಲದೇ ಕೆಲಸ ನಿರ್ವಹಿಸಿದರೆ ಆಗೋದಿಲ್ಲ. ತಿಂಗಳಿಗೊಂದು ಸಭೆ ನಡೆಸಿ, ಹಿಂದಿನ ಪ್ರಗತಿ ಕುರಿತು ಅವಲೋಕನ ಮಾಡಿ. ವಾರಕ್ಕೊಮ್ಮೆ ಟೌನ್‍ನಲ್ಲಿ ಓಡಾಡಿ ಎಂದು ಅಧ್ಯಕ್ಷರಿಗೆ ಸಲಹೆ ನೀಡಿದರು. ನೀವು ಸಿರಾದಲ್ಲಿ ಸ್ಟೇ ಮಾಡಿದ ಬೆಳಿಗ್ಗೆ ನಿಮ್ಮ ನೇತೃತ್ವದಲ್ಲೇ ಎಲ್ಲ ಸದಸ್ಯರೊಂದಿಗೆ ಟೌನ್‌ನಲ್ಲಿ ಓಡಾಡೋಣ ಎಂದು ರಾಜಣ್ಣ ಸಚಿವರಿಗೆ ತಿಳಿಸಿದ್ದು ಸಭೆಯಲ್ಲಿ ನಗು ತರಿಸಿತು.

ಸಭೆಗೂ ಮುನ್ನ ಮಾತನಾಡಿದ ಯೋಜನಾ ನಿರ್ದೇಶಕಿ ಅನುಪಮಾ ಸ್ವಚ್ಚ ಭಾರತ್ ಮಿಷನ್ ಅಡಿ ನಗರದಲ್ಲಿ ಒಂದೂವರೆ ಸಾವಿರ ಶೌಚಾಲಯ ನಿರ್ಮಾಣ ಕಾರ್ಯ ಬಾಕಿ ಇದೆ. ಅದಕ್ಕೆ ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. 10-12 ಜನ ಗುತ್ತಿಗೆದಾರರನ್ನು ಗುರುತಿಸಿ ಅವರಿಂದ ಕೆಲಸ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಈ ವೇಳೆ ಕೆಲ ಸದಸ್ಯರು ಕೊಡುವ 10 ಸಾವಿರಕ್ಕೆ ಹಣ ಇಲ್ಲ ಎನ್ನುವ ನೆಪ ಮಾಡಿ ತೊಂದರೆ ಕೊಡುತ್ತಾರೆ ಎಂದು ಸದಸ್ಯ ಪ್ರಕಾಶ್ ಮುದ್ದುರಾಜ್ ದೂರಿದರು. ಅದಕ್ಕುತ್ತರಿಸಿದ ಅಧಿಕಾರಿ, ಶೌಚಾಲಯ ನಿರ್ಮಾಣಕ್ಕೆ 10 ಅಲ್ಲ 15 ಸಾವಿರ ಹಣ ನೀಡಲಾಗುತ್ತಿದೆ. ನಿಮ್ಮಲ್ಲಿ ಹಣದ ಕೊರತೆ ಇದ್ದರೆ ನನಗೆ ವರದಿ ಮಾಡಿ ನಾನು ಸರ್ಕಾರದಿಂದ ತರಿಸಿಕೊಡುತ್ತೇನೆ ಎಂದರು.

ಅಧ್ಯಕ್ಷರು ಸರಿಯಾದ ಮಾಹಿತಿ ಪಡೆದು, ಸದಸ್ಯರಿಗೆ ತಿಳಿಸಬೇಕು. ನಿರ್ಮಾಣದ ಫೈಲ್ ತೆಗೆಸಿ ನೋಡಬೇಕು, ಹಣ ಪಾವತಿ ಕುರಿತು ಮಾರ್ಗದರ್ಶನ ನೀಡಬೇಕು. ಯಾವುದನ್ನೂ ನೋಡಿಯೇ ಇಲ್ಲ ಎಂದರು. ಕೂಡಲೇ ಪ್ರತಿಕ್ರಿಯಿಸಿದ ಅಧ್ಯಕ್ಷ ಅಮಾನುಲ್ಲಾಖಾನ್ ಪೌರಾಯುಕ್ತರು ಹೇಳಿದ್ದನ್ನೇ ನಾನು ನಿಮಗೆ ತಿಳಿಸಿದ್ದೇನೆ ಎಂದರು.

ಹೀಗೆ ಶೌಚಾಲಯ ನಿರ್ಮಾಣ ಕುಂಠಿತವಾಗಿರುವುದಕ್ಕೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆಗೆ ಇಡೀ ಆರೋಗ್ಯ ಶಾಖೆಯೇ ಇದಕ್ಕೆ ಹೊಣೆ. ಅದರಲ್ಲೂ ಶೌಚಾಲಯ ನಿರ್ಮಾಣದ ಹೊಣೆ ಹೊತ್ತ ಅಧಿಕಾರಿ ಗೌಸ್, ಮಾರೇಗೌಡ ಇಬ್ಬರೂ ಸಾವಿರ ಪಡೆಯದೇ ಕೆಲಸ ಮಾಡುವುದೇ ಇಲ್ಲ ಎಂದು ದೂರಿದ ಸದಸ್ಯ ಅಂಜಿನಪ್ಪ ತಮ್ಮಲ್ಲಿ ಅದಕ್ಕೆ ವಿಡಿಯೋ ಇದೆ. ಸಭೆಯಲ್ಲಿ ಸಚಿವರು ಪ್ರದರ್ಶಿಸಿ ಎಂದರೆ ತೋರಿಸುತ್ತೇನೆ ಎಂದರು. ಸದಸ್ಯರ ಮಾತಿಗೆ ಸ್ಪಂದಿಸಿದ ಪಿಡಿ ಅನುಪಮಾ ಗೌಸ್ ಬಗ್ಗೆ ತಮಗೂ ದೂರು ಬಂದಿದೆ. ಆದರೆ ಇನ್ನೊಬ್ಬರ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.

ಪ್ರತಿನಿತ್ಯವೂ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವ ಕುರಿತು ಯೋಜನಾ ನಿರ್ದೇಶಕಿ ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸದಸ್ಯ ಪ್ರಕಾಶ್ ಅಧಿಕಾರಿಗಳು ಇಲಿ ಹ್ಹೂಂ ಅಂತಾರೆ. ಸಭೆ ಮುಗಿದ ನಂತರ ನಾವೇ ಬೇರೆ, ಅವರೇ ಬೇರೆ ಎನ್ನುವಂತೆ ವರ್ತಿಸುತ್ತಾರೆ ಎಂದರು. ಪ್ರತಿ ಶನಿವಾರ ತಾವು ನಗರಸಭೆಗೆ ಬಂದು ವಾರದ ಪೇಮೆಂಟ್ ಕೊಡಿಸುವ ಜವಾಬ್ದಾರಿ ನನಗಿರಲಿ ಎಂದು ಅನುಪಮಾ ಸದಸ್ಯರನ್ನು ಸಮಾಧಾನಗೊಳಿಸಿದರು.

ಪ್ರತಿಷ್ಟೆ ಬಿಡಲು ಹೇಳಿ: ಶೌಚಾಲಯ ನಿರ್ಮಾಣ ಹಾಗೂ ನಿವೇಶನ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಒಬ್ಬರಿಗಿಂತ ಒಬ್ಬರು ಸದಸ್ಯರು ತಮ್ಮ ಅಹವಾಲು ಹೇಳುತ್ತಿದ್ದುದನ್ನು ಉಲ್ಲೇಖಿಸಿದ ಸಚಿವರು ಮಾಧ್ಯಮದವರು ಇದ್ದಾರೆ. ಇಲ್ಲಿ ನಡೆಯುವ ಉಪಯುಕ್ತ ಚರ್ಚೆಗಿಂತ ನಿಮ್ಮ ಹಾವಭಾವ ಭಂಗಿಗಳ ಕುರಿತು ದಿನವಿಡೀ ಪ್ರದರ್ಶನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ವರದಿಗಾರರೊಬ್ಬರು ಇಂದಿನ ಸಭೆಯೂ ಸೇರಿದಂತೆ ಯಾವುದೇ ಸಭೆಯಲ್ಲಿ ವಿಷಯದ ಬಗ್ಗೆ ಗಂಭೀರ ಚರ್ಚೆಗಿಂತ ತಮ್ಮ ಹೆಚ್ಚುಗಾರಿಕೆ ತೋರಿಸಿಕೊಳ್ಳುವಲ್ಲೇ ಸದಸ್ಯರು ಹೆಚ್ಚು ಗಮನ ನೀಡುತ್ತಾರೆ. ಒಬ್ಬರಿಗಿಂತ ಒಬ್ಬರು ಏರು ಧ್ವನಿಯಲ್ಲಿ ಮಾತನಾಡಿದರೆ ಮಾತ್ರ ತಾವು ಸದಸ್ಯರು ಎಂದು ಬಿಂಬಿಸಿಕೊಂಡಂತೆ ಎಂದು ಭಾವಿಸಿದಂತಿದೆ. ಹಾಗಾಗಿ ಸದಸ್ಯರಿಗೆ ಮೊದಲು ಪ್ರತಿಷ್ಟೆ ಬಿಟ್ಟು, ವಿಷಯದ ಬಗ್ಗೆ ಗಂಭೀರ ಚರ್ಚೆ ಮತ್ತು ಅದರ ಅನುಷ್ಟಾನದ ಬದ್ಧತೆ ಬಗ್ಗೆ ತಿಳಿಸಿ ಎಂದು ಸಲಹೆ ನೀಡಿದರು.

ನೂತನ ಪೌರಾಯುಕ್ತ ಗಂಗಣ್ಣ ತಮ್ಮನ್ನು ಸಭೆಗೆ ಪರಿಚಯಿಸಿಕೊಂಡರು. ಸಭೆಯಲ್ಲಿ ವರ್ಗಾಯಿತ ಪೌರಾಯುಕ್ತ ಯೋಗಾನಂದ್, ಯೋಜನಾ ನಿರ್ದೇಶಕಿ ಅನುಪಮಾ, ನಗರಸಭೆ ಅಧ್ಯಕ್ಷ ಅಮಾನುಲ್ಲಾಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜು, ಸದಸ್ಯ ಶ್ರೀನಿವಾಸ ಗುಪ್ತ, ಎಸ್.ಜೆ.ರಾಜಣ್ಣ, ಇಸ್ಮಾಯಿಲ್, ಅಬ್ದುಲ್ ಖಾದಿರ್, ಸರಿತ, ರೇಣುಕಮ್ಮ, ಆರ್. ಉಗ್ರೇಶ್, ಮೌನೇಶ್, ಬಿ. ಅಂಜಿನಪ್ಪ, ನರಸಿಂಹಯ್ಯ, ಸಂತೋಷ್, ಮುಖಂಡ ಅಜಯ್ ಮತ್ತಿತರರು ಉಪಸ್ಥಿತರಿದ್ದರು.

Leave a Comment