ಎಲ್ಲ ರಾಜ್ಯಗಳಲ್ಲಿ ಎನ್‌ಆರ್‌ಸಿ ಕ್ರಮಕ್ಕೆ ಅಸ್ಸಾಂ ಸಿಎಂ ಆಗ್ರಹ

 

ನವದೆಹಲಿ, ಸೆ. ೧೧: ಅಕ್ರಮ ವಲಸಿಗರ ಸಮಸ್ಯೆಯನ್ನು ‘ರಾಷ್ಟ್ರೀಯ ಸವಾಲು’ ಎಂದು ಬಣ್ಣಿಸಿರುವ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೋವಾಲ್, ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್.ಆರ್.ಸಿ.) ಕ್ರಮವನ್ನು ದೇಶದ ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಎನ್.ಆರ್.ಸಿ.ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮಗಂತೂ ಅಕ್ರಮ ವಲಸಿಗರದ್ದೇ ದೊಡ್ಡ ಸವಾಲಾಗಿದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಎನ್‌ಆರ್‌ಸಿಯನ್ನು ಎಲ್ಲ ರಾಜ್ಯಗಳಲ್ಲೂ ಅಳವಡಿಸಬೇಕು. ಭಾರತೀಯರನ್ನು ರಕ್ಷಿಸಲು ಈ ದಾಖಲೆ ಬಳಸಿಕೊಳ್ಳಬಹುದು’ ಎಂದು ಸಲಹೆ ನೀಡಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿ, ಎನ್‌ಆರ್‌ಸಿ ನಂತರ ‘ಪತ್ತೆ ಮಾಡುವುದು’, ‘ಹೆಸರು ತೆಗೆಯುವುದು’ ಮತ್ತು ‘ಹೊರಗಟ್ಟುವುದು’ ಎಂಬ ೩ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಕ್ರಮ ವಲಸಿಗರನ್ನು ಎನ್.ಆರ್.ಸಿ. ತಡೆಯುತ್ತದೆ. ನಂತರದ ಕ್ರಮವೆಂದರೆ ಅಕ್ರಮ ವಲಸಿಗರನ್ನು ನಿರಾಕರಿಸುವುದು, ಅಂತಹವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವುದು ಹಾಗೂ ಅವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗದಂತೆ ನೋಡಿಕೊಳ್ಳುವುದು ಮತ್ತು ೩ನೇ ಹಂತದಲ್ಲಿ ಅಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟಲಾಗುವುದು’ ಎಂದು ಹೇಳಿದರು.
ಅಸ್ಸಾಂನ ಪ್ರಥಮ ಎನ್.ಆರ್.ಸಿ. ಕರಡು ಜನವರಿಯಲ್ಲಿ ಬಿಡುಗಡೆಯಾಗಿ, ಅದರಲ್ಲಿ ೧.೯ ಕೋಟಿ ಅಸ್ಸಾಮಿಗಳಿದ್ದಾರೆ. ೨ನೇ ಅಂತಿಮ ಕರಡು ಜುಲೈನಲ್ಲಿ ಬಿಡುಗಡೆಯಾಗಿ ಅದರಲ್ಲಿ ೨.೮೯ ಕೋಟಿ ಹೆಸರುಗಳನ್ನು ಸೇರಿಸಲಾಗಿದೆ. ಒಟ್ಟು ೩.೨೯ ಕೋಟಿ ಅರ್ಜಿಗಳು ಅಸ್ಸಾಂನಲ್ಲಿ ಸಲ್ಲಿಸಲ್ಪಟ್ಟಿದ್ದು ಸುಮಾರು ೪೦ ಲಕ್ಷ ಜನರ ಹೆಸರುಗಳನ್ನು ಕೈಬಿಡಲಾಗಿದೆ.
ಎನ್.ಆರ್.ಸಿ. ಎಂಬುದು ಭಾರತದ ನಾಗರಿಕರ ದಾಖಲೆ ಹೊಂದಿದ್ದು ಮೊದಲ ಬಾರಿಗೆ ಅದನ್ನು ೧೯೫೧ರಲ್ಲಿ ತಯಾರಿಸಲಾಯಿತು. ನಂತರ ಅಕ್ರಮ ವಲಸಿಗರನ್ನು ಹೊರಗಟ್ಟಲಿಕ್ಕಾಗಿ ಅದನ್ನು ಅಸ್ಸಾಂನಲ್ಲಿ ಮಾತ್ರ ಮತ್ತೆ ಜಾರಿಗೆ ತರಲಾಯಿತು.

Leave a Comment