ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ

ಕೊರಟಗೆರೆ, ಮೇ ೧೯- ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿದ್ದು, ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣವನ್ನು ಪಡೆಯಲು 6 ವರ್ಷದಿಂದ 14 ವಯೋಮಾನದ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯವಾಗಿ ಉಚಿತ ಶಿಕ್ಷಣ ಒದಗಿಸಲಾಗುತ್ತದೆ ಎಂದು ತಹಶೀಲ್ದಾರ್ ರಾಜಣ್ಣ ತಿಳಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2017-18ನೇ ಸಾಲಿನಲ್ಲಿ ವಿಶೇಷ ದಾಖಲಾತಿ ಹಾಗೂ ಸಾಮಾನ್ಯ ದಾಖಲಾತಿ ಅಂದೋಲನ ಅಂಗವಾಗಿ ಏರ್ಪಡಿಸಿದ್ದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2016 ನೇ ಡಿಸೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 8318 ಮಕ್ಕಳು ಶಾಲೆಯಿಂದ ಹೊರಗುಳಿದ್ದನ್ನು ಗುರುತಿಸಿ ದಾಖಲಾತಿ ಆಂದೋಲನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸಿ ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಮುಖ್ಯ

ಉದ್ದೇಶವಾಗಿದ್ದು, ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು, ಶಿಕ್ಷಕರು 5 ವರ್ಷ 10 ತಿಂಗಳ ವಯೋಮಾನದ ಅರ್ಹ ಎಲ್ಲಾ ಮಕ್ಕಳನ್ನು ಗುರುತಿಸಿ ನೇರವಾಗಿ ಶಾಲೆಗೆ ದಾಖಲಿಸುವಂತೆ ಹಾಗೂ ಶಾಲೆಗೆ ದಾಖಲಾಗಿರುವ ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಂದೇ ಶಾಲೆಗೆ ಹಾಜರಾಗುವಂತೆ ಶಿಕ್ಷಕರು ವೈಯಕ್ತಿಕ ಕಾಳಜಿ ವಹಿಸಿ ದಾಖಲಾತಿ ಆಂದೋಲನ ಯಶಸ್ವಿಗೊಳಿಸಬೇಕೆಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್‍ಕುಮಾರ್ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ದಾಖಲಿಸುವ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯೊಂದಿಗೆ ವಿದ್ಯಾವಂತ ಯುವಕ-ಯುವತಿಯರು, ಸ್ಥಳೀಯ ಸ್ವಯಂ ಸೇವಾ ಸಂಘಗಳು, ಸರ್ಕಾರೇತರ ವಿವಿಧ ಇಲಾಖೆಗಳ ಸಿಬ್ಬಂದಿ, ಗ್ರಾ.ಪಂ., ತಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಸಹಕರಿಸುವ ಮೂಲಕ ಎಲ್ಲಾ 5 ವರ್ಷ 10 ತಿಂಗಳ ವಯೋಮಾನದ ಮಕ್ಕಳನ್ನು ಶಾಲಾ

ವ್ಯಾಪ್ತಿಗೆ ತರಲು ಸಕ್ರಿಯವಾಗಿ ಪಾತ್ರ ವಹಿಸಬೇಕಾಗಿದೆ ಹಾಗೂ ಶಾಲೆಗೆ ದಾಖಲಾದ ದಿನವೆ ಎಲ್ಲಾ ಮಕ್ಕಳಿಗೂ ಸರ್ಕಾರದ ವತಿಯಿಂದ ನೀಡಲಾಗುವ ಪಠ್ಯಪುಸ್ತಕ, ಸಮವಸ್ತ್ರ, ಶಾಲಾಬ್ಯಾಗ್, ಶೂ-ಸಾಕ್ಸ್‌ಗಳು, ನೋಟ್‍ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.

ಜಾಥಾ ಕಾರ್ಯಕ್ರಮದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಮುನಿರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್.ಮಹೇಶ್, ಕ್ಷೇತ್ರ ಸಂಪನ್ಮೂಲಾಧಿಕಾರಿ ಕೆ.ಸುರೇಂದ್ರನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ. ವಿಜಯ್‍ಕುಮಾರ್, ಪ.ಪಂ. ನಾಮಿನಿ ಸದಸ್ಯ ಓಬಳರಾಜು, ಮಾಜಿ ಸದಸ್ಯ ಹೆಚ್.ಎಸ್. ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಅಪ್ಪಾಜಿರಾವ್, ಗೌರಿನಿಲಯ ಮುಖ್ಯ ಶಿಕ್ಷಕ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment