ಎಲ್ಲ ಧಾರ್ಮಿಕ ಸಂಸ್ಥೆಗಳ ಚಟುವಟಿಕೆಗಳು ನಿಷೇಧ: ಸಹಕರಿಸಲು ಮನವಿ

ಧಾರವಾಡ, ಮಾ 26-  ಇಡೀ ವಿಶ್ವಕ್ಕೆ ಮಹಾಮಾರಿಯಾಗಿರುವ ಕೋವಿಡ್-19 ಕೊರೊನಾ ವೈರಸ್ ನಿರ್ಮೂಲನೆ ಮಾಡಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಎಲ್ಲ ಧಾರ್ಮಿಕ ಸಂಸ್ಥೆಗಳ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಸರ್ಕಾರ ನಿರ್ಬಂಧಿಸಿದೆ. ಧಾರ್ಮಿಕ ಮುಖಂಡರು ಈ ಆದೇಶ ಪಾಲಿಸಲು ಆಯಾ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಧಾರ್ಮಿಕ ಮುಖಂಡರ ಸಭೆ ಉದ್ದೇಶಿಸಿ  ಅವರು ಮಾತನಾಡಿದರು.
ಹಿಂದೂ, ಮುಸ್ಲಿಂ, ಜೈನ್, ಕ್ರೈಸ್ತ್, ಬೌದ್ಧ, ಸಿಖ್ ಸೇರಿದಂತೆ ಯಾವುದೇ ಧರ್ಮದ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ತೆರೆಯುವಂತಿಲ್ಲ. ವೈಯಕ್ತಿಕ ಆರೋಗ್ಯ ಕಾಳಜಿಯೇ ಮುಖ್ಯವಾಗಿರು ಈ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನವನ್ನು ಎಲ್ಲರು ಪಾಲಿಸಲೇಬೇಕು. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಲಾಗುವದು. ಇತಿಹಾಸದಲ್ಲಿಯೇ ಇಂತಹ ಪರಿಸ್ಥಿತಿ ಎದುರಿಸಿದ ಉದಾಹರಣೆಗಳು ಇಲ್ಲ. ಈಗ ಎಲ್ಲರೂ ಒಗ್ಗಟ್ಟಾಗಿ ಅದನ್ನು ನಿರ್ವಹಿಸಬೇಕಾಗಿದೆ. ಧಾರ್ಮಿಕ ಮುಖಂಡರು ತಮ್ಮ ಸಮಾಜಗಳಲ್ಲಿ ತಿಳುವಳಿಕೆ ಮೂಡಿಸಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್ ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಸ್ವಾಮೀಜಿ, ಅಲ್ತಾಫ್ ಕಿತ್ತೂರ, ಎಚ್.ಸಿ.ಸವಣೂರ, ಅಲ್ತಾಫ್ ಹಳೂರ, ಎಂ.ಎ.ಪಠಾಣ, ಫಾದರ್ ಜೋಸೆಫ್, ಇಸ್ಮಾಯಿಲ್ ತಮಟಗಾರ ಮತ್ತಿತರರು ಸಭೆಯಲ್ಲಿ ಇದ್ದರು.

Leave a Comment