ಎಲ್ಲ ಕಾಲಕ್ಕೂ ಸಲ್ಲುವ ಪ್ರತಿಭಾನ್ವಿತ ಶ್ರೇಷ್ಠ ನಾಟಕಕಾರ ಶೇಕ್ಸಪಿಯರ್

ಧಾರವಾಡ ಜು.11-ವಾಲ್ಮೀಕಿ, ವ್ಯಾಸ ವಿರಚಿತ ರಾಮಾಯಣ, ಮಹಾಭಾರತಗಳಲ್ಲಿಯ ಅಮೂಲ್ಯ ಜೀವನ ದರ್ಶನಗಳಿಂದಾಗಿ ನಾವು ಪ್ರತಿದಿನವೂ ಈ ಮಹಾಕಾವ್ಯಗಳನ್ನು ನೆನೆಯುತ್ತೇವೆ. ಅದರಂತೆಯೇ ಮಹಾಕಾವ್ಯಗಳಿಗೆ ಸರಿಸಮವಾದ ಜೀವನದರ್ಶನಗಳನ್ನು ಹೊಂದಿರುವ ಶೇಕ್ಸಪಿಯರನ ವೈವಿಧ್ಯಮಯ ನಾಟಕಗಳೂ ಕೂಡ ಅಂತಹದೇ ಗೌರವಕ್ಕೆ ಪಾತ್ರವಾಗಿದ್ದು ಅಲ್ಲಿಯ ಅಸಂಖ್ಯ ಮನಕಲುಕುವ ಚಿತ್ರಣಗಳು ಎಲ್ಲ ಕಾಲಕ್ಕೂ ಸಮಕಾಲೀನವಾಗಿ ನಿಲ್ಲುತ್ತವೆ ಎಂದು ಹಿರಿಯ ಚಿಂತಕ ಡಾ|| ಸಿ.ವಿ. ವೇಣುಗೋಪಾಲ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು  ಸಾಧನಕೇರಿಯ `ಚೈತ್ರ`ದ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಶೇಕ್ಸಪಿಯರನ ದುರಂತನಾಟಕಗಳನ್ನು ಕುರಿತಾದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅವರು ಮುಂದುವರಿದು ಮಾತನಾಡುತ್ತ ಜಗತ್ತಿನ ಎಲ್ಲ ಭಾಷೆಗಳಿಗೆ ಅನುವಾದಗೊಂಡ ಶೇಕ್ಸಪಿಯರನ ಕೃತಿಗಳನ್ನು ಬಸವಪ್ಪ ಶಾಸ್ತ್ರಿಗಳಿಂದ ಹಿಡಿದು ಕುವೆಂಪು, ಮಾಸ್ತಿ, ಡಿ.ವಿ.ಜಿ., ಹೊನ್ನಾಪುರಮಠ, ಪರ್ವತವಾಣಿ, ಶಂಕರ ಮೊಕಾಶಿ ಪುಣೇಕರ, ರಾಮಚಂದ್ರದೇವ, ತೋಂಟದಾರ್ಯರ ವರೆಗೂ ಈ ಎಲ್ಲ ಮಹನೀಯರು ಕನ್ನಡಕ್ಕೆ ಭಾಷಾಂತರ ಇಲ್ಲವೇ ರೂಪಾಂತರಗೊಳಿಸಿರುವದೇ ಅವನ ಹಿರಿಮೆ ಹಾಗೂ ಅಸಾಧಾರಣ ಪ್ರತಿಭೆಗೆ ಸಾಕ್ಷಿ ಎಂದರು. ಮಾನವ ಜೀವನದಲ್ಲಿ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವಗಳಂತಹ ಗುಣಾತ್ಮಕ ಅಂಶಗಳಿಗೆ ಬೆಲೆಯೇ ಇಲ್ಲದ ಮತ್ತು ಅಸೂಯೆ, ಮತ್ಸರ, ದ್ವೇಷ ಪ್ರತೀಕಾರ, ಅಹಂಕಾರಗಳಂತಹ ಕೆಡುಕುಗಳೇ ಮೇಲುಗೈ ಸಾಧಿಸುವದನ್ನು ಹ್ಯಾಮಲೆಟ್, ಒಥೆಲೋ, ಕಿಂಗಲಿಯರ್, ಮ್ಯಾಕಬೆಥ್ ಮುಂತಾದ ಅವನ ದುರಂತ ನಾಟಕಗಳಲ್ಲಿ ನಾವು ಧಾರಾಳವಾಗಿ ಕಾಣುತ್ತೇವೆ ಎಂದು ಡಾ|| ವೇಣುಗೋಪಾಲ ಶೇಕ್ಸಪಿಯರನ ಕೃತಿಗಳನ್ನು ವಿಸ್ತಾರವಾಗಿ ಸಮೀಕ್ಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದ ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕ ಡಾ|| ವಿ.ಟಿ.ನಾಯಕ ಅವರು ಮಾತನಾಡಿ ಶೇಕ್ಸಪಿಯರ್ ತನ್ನ ನಾಟಕಗಳಲ್ಲಿ ಸೃಷ್ಟಿಸಿದ ಪಾತ್ರಗಳ ವೈವಿಧ್ಯತೆ ಅದ್ಭುತವಾಗಿದ್ದು ಅತ್ಯಂತ ಮಾರ್ಮಿಕವಾಗಿ ಹಿಡಿದಿಟ್ಟ ಅಲ್ಲಿಯ ವೈಚಿತ್ರ್ಯಗಳು, ವೈಪರೀತ್ಯಗಳು, ವಿಷಯ ಸಾಮಾಗ್ರಿ ಹಾಗೂ ಹೇಳುವ ಹೊಸ ಹೊಸ ರೀತಿಗಳೇ ಅವನನ್ನು ಜಗತ್ತಿನ ಒಬ್ಬ ಶ್ರೇಷ್ಠನಾಟಕಕಾರನನ್ನಾಗಿ ರೂಪಿಸಿವೆ ಎಂದರು.
ಅನ್ವೇಷಣಕೂಟದ ಅಧ್ಯಕ್ಷತೆ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಡಾ|| ದೀಪಕ ಆಲೂರ, ಪ್ರೊ. ದುಷ್ಯಂತ ನಾಡಗೌಡ, ಸುಧೀಂದ್ರ ಹಂಚಿನಮನಿ, ಆನಂದ ಪಾಟೀಲ, ಪ್ರೊ. ಸಿ.ಆರ್. ಜೋಶಿ, ಶ್ರೀನಿವಾಸ ವಾಡಪ್ಪಿ, ಎಚ್.ಎಂ. ಪಾಟೀಲ, ಗಿರೀಶ ವಾಜಪೇಯಿ, ಕೆ.ಎನ್.ಹಬ್ಬು, ಎಸ್.ಎಲ್. ಕುಲಕರ್ಣಿ, ಮಾಲತೇಶ ಹುಬ್ಬಳ್ಳಿ, ರಾಮಚಂದ್ರ ಜೋಶಿ, ಕೆ.ಬಿ. ಬಾಗಲವಾಡಿ, ಎಸ್.ಎಮ್. ದೇಶಪಾಂಡೆ, ಎಂ.ಎಲï. ವಿಜಾಪುರ, ಸು.ಹ. ಕೆರೂರ, ರಾಜೀವ ಪಾಟೀಲ ಕುಲಕರ್ಣಿ, ಬಿ.ಜಿ. ಹೊಂಬಳ, ಎಮ್.ಎಸ್. ತಿಮ್ಮೋಲಿ, ಎಸ್. ಗುರುನಾಥ, ಮೋಹನ ವೈದ್ಯ, ಎಮ್.ವಿ. ಹೊಸಮನಿ, ದಮಯಂತಿ ನರೇಗಲ್, ಡಾ|| ಮಂದಾಕಿನಿ ಪುರೋಹಿತ, ಸರೋಜಾ ಕುಲಕರ್ಣಿ, ಡಾ|| ಶೀಲಾ ಚೌಗುಲೆ, ಸರಸ್ವತಿ ಭೋಸಲೆ, ವಿನುತಾ ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು.

Leave a Comment