ಎಲ್ಲೆಡೆ ಮೋದಿ ಮಂತ್ರ ಸಿದ್ದುಗೆ ಅರ್ಥವಾಗದ ತಂತ್ರ

ಮೈಸೂರು, ಜೂ. ೧೩- ಪ್ರಧಾನಿ ನರೇಂದ್ರಮೋದಿ ಅವರ 5 ವರ್ಷದ ಆಡಳಿತದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ರೈತರು, ಯುವಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಪುಲ್ವಾಮಾ ದಾಳಿಗೆ ಮುನ್ನೆಚ್ಚೆರಿಕೆ ಕ್ರಮಕೈಗೊಳ್ಳದಿರುವುದೇ ಅಮಾಯಕ ಯೋಧರ ಸಾವಿಗೆ ಕಾರಣ. ಗುಪ್ತಚರ ವೈಫಲ್ಯದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಬದಲು ಮಾಧ್ಯಮಗಳೂ ಸೇರಿದಂತೆ ಎಲ್ಲರೂ ನರೇಂದ್ರಮೋದಿ ಅವರನ್ನು ದೇಶಭಕ್ತ ಎನ್ನುವ ರೀತಿ ಬಿಂಬಿಸಿದವು ಎಂದು ವಾಗ್ದಾಳಿ ನಡೆಸಿದರು.
45 ವರ್ಷಗಳ ಆಡಳಿತ ವ್ಯವಸ್ಥೆಯಲ್ಲಿ ದೇಶದ ಆರ್ಥಿಕತೆ ಕುಸಿದು ಹೋಗಿದೆ. ರೂಪಾಯಿಮೌಲ್ಯ ಕೆಟ್ಟ ಪರಿಸ್ಥಿತಿಯಲ್ಲಿದೆ. ಆದರೂ, ಎಲ್ಲರೂ ಮೋದಿ ಮೋದಿ ಎನ್ನುತ್ತಿದ್ದಾರೆ. ಇದು ಅರ್ಥವಾಗದ ಸಂಗತಿ ಎಂದು ಹೇಳಿದರು.
5 ವರ್ಷಗಳ ಕಾಲ ನರೇಂದ್ರಮೋದಿ ಅವರು ಬರೀ ಭಾಷಣ, ನಾಟಕ, ಸುಳ್ಳು ಹೇಳುವ ಜತೆಗೆ ಭಾವನಾತ್ಮಕವಾಗಿ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದರು. ಜನರು ಅವರು ಹೇಳಿದ್ದನ್ನೇ ಸತ್ಯ ಎಂದು ನಂಬುವಂತೆ ಬಿಂಬಿಸಲಾಗಿತ್ತು.
ಐದು ವರ್ಷಗಳ ಪ್ರಧಾನಿಯಾದ್ದ ಅವಧಿಯಲ್ಲಿ ಹೇಳಿಕೊಳ್ಳುವ ಯಾವುದೇ ಕೆಲಸ ಮಾಡಿಲ್ಲ ಎಂದು ದೂರಿದರು.
ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಮಾತನಾಡಿದರೆ ದೇಶದ್ರೋಹಿ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತಿದೆ. ಸತ್ಯ ಹೇಳಲಾಗದಂತ ಸ್ಥಿತಿಗೆ ತಲುಪುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರಾಹುಲ್ ಮುಂದುವರೆಯಬೇಕು
ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಪ್ರಸ್ತುತ ಸನ್ನಿವೇಶದಲ್ಲಿ ಮುಂದುವರೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು. ರಾಹುಲ್‌ಗಾಂಧಿಯವರ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್‌ನ ಯಾರೂ ಸಿದ್ಧರಿಲ್ಲ. ಅವರು ಅದೇ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದರು.

ಎಸ್‌ಐಟಿ ರಚನೆ
ಐಎಂಎ ಸಂಸ್ಥೆಯಲ್ಲಿ ನಡೆದಿರುವ ಹಗರಣ ಸಂಬಂಧ ಎಸ್‌ಐಟಿ ರಚಿಸಲಾಗಿದೆ. ಮಾಜಿ ಸಚಿವ ರೋಷನ್‌‌ಬೇಗ್ ಅವರು ಎಸ್‌ಐಟಿ ಮುಂದೆ ಹೇಳಲಿ ಎಂದರು.
ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದಕ್ಕೆ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ ಎನ್ನುವ ರೋಷನ್‌ಬೇಗ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಇಲ್ಲಿ ಹೇಳುವುದನ್ನು ಅಲ್ಲಿ ಹೇಳಪ್ಪ ಎಂದರು.

Leave a Comment