ಎಲ್ಲೆಡೆ ನಿಲ್ಲದ ವರುಣನ ಅಬ್ಬರ

ಬೆಂಗಳೂರು, ಜು.೧೨-ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ,ಮೈಸೂರು, ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯಾದ್ಯಂತ ಇನ್ನೂ ಐದು ದಿನಗಳ ಮಳೆಯಾಗುವ ಸಾದ್ಯತೆಗಳಿವೆ.

  •  ಮುಂದುವರಿದ ಮಳೆಯ ಅರ್ಭಟ
  •  ಕರಾವಳಿ,ಮಲೆನಾಡಿನಲ್ಲಿ ಮಳೆ ಜೋರು
  •  ದ್ವೀಪವಾದ ಭಾಗಮಂಡಲ
  •  ಕಳಸ,ಹೊರನಾಡು ರಸ್ತೆ ಸಂಪೂರ್ಣ ಬಂದ್,
  •  ಭರ್ತಿಯಾಗುವ ಹಂತದಲ್ಲಿ ಜಲಾಯಶಗಳು
  •  ಹಲವೆಡೆ ಶಾಲಾ ಕಾಲೇಜಿಗೆ ರಜೆ

ಕೊಡಗಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಭಾಗಮಂಡಲ ದ್ವೀಪದಂತಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಭಾರಿಗೆ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಶಿವಮೊಗ್ಗ ಶಿಲ್ಲೆಯಲ್ಲಿಯೂ ಜನ ಪರದಾಡುವಂತಾಗಿದೆ. ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಚಿಕ್ಕಮಗಳೂರಿನಲ್ಲೂ ಭಾರೀ ಮಳೆಯಾಗ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳಸಾ-ಹೊರನಾಡು ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರಿನ ಪ್ರಮಾಣ ಹೆಚ್ಚಾಗ್ತಿದ್ದು ಸಂಚಾರ ಸ್ಥಗಿತಗೊಂಡಿದೆ.

ಮೈಸೂರಿನ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಉಕ್ಕಿ ಹರಿಯುತ್ತಿದೆ. ಅತ್ತ, ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಹಿಪ್ಪರಗಿ ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ಕಾರದಗಾ-ಭೋಜ, ದತ್ತವಾಡ-ಮಲಿಕವಾಡ, ಕಲ್ಲೋಳ- ಯಡೂರು ಸೇತುವೆಗಳು ಜಲಾವೃತಗೊಂಡಿವೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ನದಿಗಳು- ಹಳ್ಳ-ಕೊಳ್ಳಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.ಶಿಥಿಲಾವಸ್ಥೆಯಲ್ಲಿರುವ ಮನೆ, ಕಟ್ಟಡಗಳಲ್ಲಿರುವ ವಾಸ್ತವ್ಯ ಸ್ಥಳಾಂತರಿಸಬೇಕು. ಕಾಲುಹಾದಿ, ಕಾಲು ಸಂಕ, ಹರಿಯುವ ನೀರಿನ ಬದಿಗಳಲ್ಲಿ ನಡೆಯುವ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಣ್ಣ ಮಕ್ಕಳನ್ನು ಅಂತಹ ಸ್ಥಳಗಳಿಗೆ ಒಬ್ಬಂಟಿಯಾಗಿ ಕಳುಹಿಸಬಾರದು. ಅತಿ ಹೆಚ್ಚು ಮಳೆಯಾಗುತ್ತಿರುವ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಆದಷ್ಟು ಮನೆಯೊಳಗೆ ಸುರಕ್ಷಿತವಾಗಿರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಜಿಲ್ಲೆಯ ನದಿಗಳಾದ ತುಂಗ-ಭದ್ರಾ, ಮಾಲತಿ, ಶರಾವತಿ ನದಿಗಳಲ್ಲಿ ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ತೀರ್ಥಹಳ್ಳಿಯ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತಿದೆ. ಇದೇ ಮಳೆ ಪ್ರಮಾಣ ಮುಂದುವರೆದಲ್ಲಿ ತೀವ್ರ ಹಾನಿ ಸಾಧ್ಯತೆ ಹೆಚ್ಚಾಗಿದೆ.

ಪಶ್ಚಿಮ ಘಟ್ಟಗಳ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯ ಪರಿಣಾಮ ಹಾಸನದ ಗೊರೂರು ಹೇಮಾವತಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು ಹಾಸನ ಜಿಲ್ಲೆಯಾದ್ಯಂತ ಮಳೆ ಆರ್ಭಟ ಹೆಚ್ಚಾಗಿದೆ. ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ.

ಹೇಮಾವತಿ ಭರ್ತಿಯಾಗ ಕೆಲವೇ ಅಡಿ ನೀರು ಬಾಕಿ ಇದ್ದು,ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ, ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಮಾವತಿ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗೂ ಕೆಲವೆಡೆ ಹಿನ್ನಡೆಯಾಗಿದೆ. ಅರಕಲಗೂಡು, ಹಾಸನ ಮೊದಲಾದ ಕಡೆಗಳಲ್ಲಿ ತಂಬಾಕು, ಆಲೂಗೆಡ್ಡೆ ಮೊದಲಾದ ಬೆಳೆ ಅತಿವೃಷ್ಟಿಯಿಂದ ಹಾಳಾಗಿದೆ. ಸಕಲೇಶಪುರ ವಿವಿಧೆಡೆ ಗುಡ್ಡ ಕುಸಿತ ಉಂಟಾಗಿದೆ. ಹೆಚ್ಚು ಮಳೆಗೆ ವಿದ್ಯುತ್ ಕಂಬ ಮುರಿದು ಬಿದ್ದು, ಕಾಡಂಚಿನ ಗ್ರಾಮಗಳಲ್ಲಿ ಕರೆಂಟ್ ಕೈ ಕೊಟ್ಟಿದ್ದು, ಜನರು ಪರದಾಡುವಂತಾಗಿದೆ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

Leave a Comment