ಎಲ್ಲಿ ಬಿದಿರಿನ ಬುಟ್ಟಿ, ಮೊರಗಳು ! !

ಬಿದಿರಿನ ಬುಟ್ಟಿ, ಬಿದಿರಿನ ಚಾಪೆ, ಹೂವಿನ ಬುಟ್ಟಿ ಈಗೆಲ್ಲಿ ಎಂಬ ಪ್ರಶ್ನೆ. ಇದೀಗ ನಗರ ವಾಸಿಗಳಲ್ಲಿ ಹಳ್ಳಿಗರನ್ನು ಕಾಡುವ ಪ್ರಶ್ನೆ. ಮದುವೆಯಾಗಿ ಗಂಡನ ಮನೆಗೆ ತೆರಳುವ ವೇಳೆ ಬಿದಿರಿನ ಬುಟ್ಟಿಗಳಲ್ಲಿ ತಿಂಡಿತಿನಿಸುಗಳನ್ನು ಕಳುಹಿಸುವ ಪದ್ಧತಿ ಈಗ ಕಣ್ಮರೆಯಾಗಿದೆ.

ಬಿದಿರಿನಿಂದ ಮಾಡಿದ ಚಾಪೆ, ಮೊರಗಳು, ಕುಕ್ಕೆ, ಹೂವಿನ ಬುಟ್ಟಿಗಳು ಈಗ ಸಂಪೂರ್ಣ ಕಾಣೆಯಾಗಿದ್ದು, ಆ ಜಾಗದಲ್ಲಿ ಪ್ಲಾಸಿಕ್‌ನಿಂದ ತಯಾರಾದ ವಸ್ತುಗಳು ಆಕ್ರಮಿಸಿಕೊಂಡಿವೆ. ಐಟಿ-ಬಿಟಿ ಯುಗದಲ್ಲಿ ಬಿದಿರಿನಿಂದ ತಯಾರಾದ ವಸ್ತುಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉತ್ಪನ್ನಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳು ಆದುನಿಕತೆಯ ಹೊಡೆತಕ್ಕೆ ಹೇಳ ಹೆಸರಿಲ್ಲದಂತಾಗಿವೆ.

bidiru1

ಅರಣ್ಯ ಪ್ರದೇಶಗಳಲ್ಲಿ ಮೊದಲೆಲ್ಲ ಹೇರಳವಾಗಿ ಬಿದಿರಿನ ಬೊಂಬು ಸಿಗುತ್ತಿದ್ದವು. ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರು ಬಿದಿರನ್ನೇ ಆಶ್ರಯಿಸಿ ಜೀವನ ಸಾಗಿಸುತ್ತಿದ್ದರು.

ಶತಶತಮಾನಗಳಲ್ಲಿ ಬಿದಿರಿಗೆ ಕಷ್ಟಪಡಬೇಕಾಗಿರಲಿಲ್ಲ. ಯಾರು ಪೋಷಣೆ ಮಾಡದಿದ್ದರೂ ಹೇರಳವಾದಷ್ಟು ಬಿದಿರು ಸಿಗುತ್ತಿತ್ತು. ಈಗ ಕಾಲ ಬದಲಾಗಿದೆ. ಅರಣ್ಯ ಪ್ರದೇಶಗಳು ಒತ್ತುವರಿಯಾಗಿ ಅರಣ್ಯ ಭಾಗ ಕಡಿಮೆಯಾಗುತ್ತಿದೆ. ಜೊತೆಗೆ ಬಿದಿರಿನ ಬೆಲೆ ಕೂಡ ಇಳಿಮುಖವಾಗಿದೆ. ಬಿದಿರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಿನಲ್ಲಿ ಸುತ್ತ ತಮಗೆ ಅಗತ್ಯವಿರುವ, ಎಳಸಾಗಿರುವ ಬಿದಿರುಗಳನ್ನು ಸಂಗ್ರಹಿಸಿಕೊಂಡು ಬಿದಿರಿನ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುವವರ ಸಂಖ್ಯೆಯೂ ಇಳಿಮುಖವಾಗುತ್ತಿದೆ.

ಅರಣ್ಯ ಕಾನೂನುಗಳ ಪ್ರಕಾರ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಬಿದಿರು ಕತ್ತರಿಸುವಂತಿಲ್ಲ. ಪರವಾನಗಿ ಇದ್ದವರ ಬಳಿ ತೆರಳಿ ದುಪ್ಪಟ್ಟು ಹಣ ನೀಡಿ ಬಿದಿರು ಖರೀದಿಸಬೇಕಾಗಿದೆ ಎಂಬುದು ಬಿದಿರಿನ ವಸ್ತುಗಳನ್ನು ಹೆಣೆಯುವವರ ಸಂಕಷ್ಟ.

bidiruನೂರಾರು ವರ್ಷಗಳ ಹಿಂದೆ ಎಲ್ಲಿ ನೋಡಿದರಲ್ಲಿ ಬಿದಿರಿನ ಬುಟ್ಟಿ, ಮೊರ, ತೆಂಗಿನ ಪೊರಕೆ ಕಾಣಸಿಗುತ್ತಿದ್ದವು. ಗೋಡೆಯ ಮೇಲೆ ನೇತುಹಾಕಿರುವ ಮೊರ, ಕೋಳಿ ಎಲ್ಲೆಂದರಲ್ಲಿ ಅಡ್ಡಾಡದಂತೆ ಅವುಗಳ ಮೇಲೆ ಇಡುವ ಮಂಕರಿಗಳು, ಚಾಪೆ ಬಿದಿರಿನ ಹಗ್ಗಗಳು ಪ್ರಮುಖ ಸ್ಥಾನ ಪಡೆದಿದ್ದವು.

ಬಿದಿರಿನ ವಸ್ತುಗಳ ಇಲ್ಲದಿರುವ ಮನೆಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಬಿದಿರಿನ ವಸ್ತುಗಳು ಮನೆಯನ್ನು ಆಕ್ರಮಿಸಿ ಕೊಂಡಿದ್ದವು. ಹೇಳಿ, ಕೇಳಿ ಇದು ತಾಂತ್ರಿಕಯುಗ. ಹಾಗಾಗಿ ಬಿದಿರಿನ ಜಾಗವನ್ನು ಪ್ಲಾಸ್ಟಿಕ್ ಆಕ್ರಮಿಸಿಕೊಂಡಿದೆ. ಬಿದಿರಿನ ಬಳಕೆಯು ಕಡಿಮೆಯಾಗಿದೆ.

ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರ ಎಂದು ಗೊತ್ತಿದ್ದರೂ ಬಿದಿರಿನ ವಸ್ತುಗಳ ಬದಲಾಗಿ ಆಕರ್ಷಕವಾಗಿರುವ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚು ಮಾರಾಟವಾಗುತ್ತಿವೆ. ಗ್ರಾಮೀಣ ಜನರ ನಿತ್ಯ ಕಾರ್ಯವಾಗಿದ್ದ ಗುಡಿ ಕೈಗಾರಿಕೆಗಳು ಮತ್ತೆ ತಲೆ ಎತ್ತುವ ಕಾಲ ಬಂದೇ ಬರುತ್ತದೆ ಎಂಬ ವಿಶ್ವಾಸ ಬಿದಿರು ಉತ್ಪನ್ನ ತಯಾರಿಸುವ ಜನರದ್ದಾಗಿದೆ.

Leave a Comment