ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಪ್ರಜ್ಞಾನ್‌ ಓಜಾ ಗುಡ್‌ ಬೈ

ನವದೆಹಲಿ, ಫೆ 21 – ಭಾರತ ತಂಡದ ಮಾಜಿ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಘೋಷಿಸಿದ್ದಾರೆ.

ಟ್ವಿಟರ್‌ ಮೂಲಕ ತಮ್ಮ ವಿದಾಯ ಘೋಷಿಸಿರುವ ಓಜಾ, “ಭಾರತೀಯ ಕ್ರಿಕೆಟಿಗನಾಗಿ ಮತ್ತು ದೇಶವನ್ನು ಪ್ರತಿನಿಧಿಸಿರುವುದು ನಾನು ಯುವಕನಾಗಿದ್ದಾಗ ಕಂಡ ಕನಸ್ಸಾಗಿತ್ತು. ಕ್ರಿಕೆಟ್‌ನಿಂದ ದೂರ ಉಳಿಯಲು ಇದು ಸಕಾರ ಎಂದು ಭಾವಿಸುತ್ತೇನೆ,” ಎಂದು ಟ್ವೀಟ್ ಮಾಡಿದ್ದಾರೆ.

“ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇನೆ. ಒಬ್ಬ ಕ್ರೀಡಾಪಟುವಿನ ಪರಂಪರೆ ಅವನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲಿತಾಂಶವಲ್ಲ. ಇದರ ಜತೆ ಟೀಮ್ ಮ್ಯಾನೇಜ್‌ಮೆಂಟ್, ತಂಡದ ಸದಸ್ಯರು, ತರಬೇತುದಾರರು ಮತ್ತು ಅಭಿಮಾನಿಗಳ ಪಾತ್ರವೂ ಇರುತ್ತದೆ,” ಎಂದು ಉಲ್ಲೇಖಿಸಿದ್ದಾರೆ.

33ರ ಪ್ರಾಯದ ಓಜಾ ಭಾರತದ ಪರ 18 ಟೆಸ್ಟ್, 6 ಟಿ20 ಹಾಗೂ 18 ಏಕದಿನ ಪಂದ್ಯಗಳಾಡಿದ್ದು, ಕ್ರಮವಾಗಿ 113, 10 ಹಾಗೂ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ 2013ರ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತದ ಪರ ಆಡಿದ್ದ ಕೊನೆಯ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ ಕಬಳಿಸಿದ್ದರು. ಈ ಪಂದ್ಯದಲ್ಲಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಪಂದ್ಯ ಕ್ರಿಕೆಟ್ ಆರಾಧ್ಯ ದೈವ ಸಚಿನ್‌ ತೆಂಡೂಲ್ಕರ್‌ ಅವರ ವಿದಾಯದ ಟೆಸ್ಟ್‌ ಪಂದ್ಯವಾಗಿತ್ತು.

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 92 ಪಂದ್ಯಗಳಾಡಿದ್ದಾರೆ. 2009ರಲ್ಲಿ ಡೆಕ್ಕಾನ್ ಚಾರ್ಜರ್ಸ್‌ ಪರ ಐಪಿಎಲ್‌ ಗೆ ಪದಾರ್ಪಣೆ ಮಾಡಿದ್ದರು. ಮುಂಬೈ ಇಂಡಿಯನ್ಸ್‌ ಪರ ಕೊನೆಯ ಬಾರಿ 2015ರಲ್ಲಿ ಕೊನೆಯ ಐಪಿಎಲ್ ಪಂದ್ಯವಾಡಿದ್ದರು. ಒಟ್ಟು 89 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

 

Leave a Comment