ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಆಸ್ಪತ್ರೆ : ಅಸಭ್ಯ ವರ್ತನೆಗೆ ಎಚ್ಚರ

ಸಾಂಕ್ರಾಮಿಕ ಕೊರೊನಾ : ಪ್ರಗತಿ ಪರಿಶೀಲನಾ ಸಭೆ
ರಾಯಚೂರು.ಏ.05- ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ನೆಗೆಟಿವ್ ವರದಿ ಬಂದರೇ, ಕರ್ನಾಟಕ ಸೇರಿದಂತೆ ದೇಶ ಕೊರೊನಾ ಮುಕ್ತವಾಗಿ ಉಳಿಯಲಿದೆಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀರಾಮುಲು ಅವರು ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಭೆ ಸಂದರ್ಭದಲ್ಲಿ ಮಾತನಾಡುತ್ತಾ, ನಿಜಾಮುದ್ದೀನ್‌ನಿಂದ ಬಂದಂತಹ ರಾಜ್ಯದ 14 ಜನರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಉಳಿದವರನ್ನು ಆರೋಗ್ಯ ದಿಗ್ಬಂಧನಾದಲ್ಲಿರಿಸಲಾಗಿದೆ. ಇವರಲ್ಲಿ ಯಾವುದೇ ಪಾಸಿಟಿವ್ ಕಂಡು ಬಾರದಿದ್ದಲ್ಲಿ ರಾಜ್ಯದ ಒಂದು ಸಂಕಷ್ಟ ನಿವಾರಣೆಗೊಂಡಂತಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊರೊನಾಕ್ಕೆ ಸಂಬಂಧಿಸಿ ಯಾವುದೇ ಆತಂಕ ಬೇಡ. ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಆಸ್ಪತ್ರೆ ತೆರೆಯಲಾಗುತ್ತದೆ. ಈಗಾಗಲೇ ಪ್ರಸ್ತುತ 9 ಜಿಲ್ಲೆಗಳಲ್ಲಿ ಕೊರೊನಾ ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ಅಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ. ಕೊರೊನಾಗೆ ಸಂಬಂಧಿಸಿ ಜಾಗೃತಿ ಮೂಡಿಸಲು ಜಾಗೃತಿ ಕರ್ನಾಟಕ ಯೂಟೂಬ್ ಚಾನಲ್ ಆರಂಭಿಸಲಾಗಿದೆ.
ಆರೋಗ್ಯ ದಿಗ್ಬಂಧನಾದಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ನಿಗದಿತ ಅವಧಿಯಲ್ಲಿ ಹೊರಗಡೆ ಬರುವುದು ಬೇಡ. ಇದರಿಂದ ಸಾರ್ವಜನಿಕರು ಆತಂಕಕ್ಕೆ ಗುರಿಯಾಗುತ್ತಾರೆಲ್ಲದೇ, ಕೊರೊನಾ ವಿಸ್ತರಣೆಗೆ ದಾರಿ ಮಾಡಿದಂತಾಗುತ್ತದೆ. ಜಿಲ್ಲೆಯಲ್ಲಿ ವೆಂಟಿಲೇಟರ್ ಸೇರಿದಂತೆ ಮಾಸ್ಕ್ ಇತ್ಯಾದಿ ಮೂಲಭೂತ ಸೌಕರ್ಯ ಬಗ್ಗೆ ಯಾವುದೇ ಆತಂಕಬೇಡ. ಸರ್ಕಾರ ಈ ಸಮಸ್ಯೆ ಸಂಪೂರ್ಣ ಎದುರಿಸಲು ಎಲ್ಲಾ ರೀತಿಯಲ್ಲಿ ಸನ್ನದ್ಧುವಾಗಿದೆ. ಯಾವುದೇ ಕಾರಣಕ್ಕೂ ಜನ ಆತಂಕಕ್ಕೆ ಗುರಿಯಾಗದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಬೇಕಾಗಿದೆ.
ಸಭೆಯಲ್ಲಿ ಶಾಸಕರು ಪಡಿತರಕ್ಕೆ ಸಂಬಂಧಿಸಿ ಪ್ರಸ್ತಾಪಿಸಿ ಮಾತನಾಡಿದರು. ಪಡಿತರದಲ್ಲಿ ಬೇಳೆ ವಿತರಿಸಲಾಗುತ್ತಿಲ್ಲ. ಅಲ್ಲದೇ ಈ ಭಾಗದಲ್ಲಿ ಗೋಧಿಗಿಂತ ಜೋಳ ಹೆಚ್ಚಿನ ಬಳಕೆಯಾಗುವುದರಿಂದ ಇಲ್ಲಿ ಜೋಳ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಉಸ್ತುವಾರಿ ಸಚಿವರು, ಸರ್ಕಾರದೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ರಿಮ್ಸ್, ಓಪೆಕ್, ನವೋದಯ ಆಸ್ಪತ್ರೆಗಳಲ್ಲಿ 150 ಬೆಡ್‌ಗಳನ್ನು ಸಿದ್ಧಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 500 ಬೆಡ್ ಇದಕ್ಕಾಗಿ ಸಿದ್ಧಗೊಳಿಸಲಾಗಿದೆಂದು ಹೇಳಲಾಯಿತು. ತಾಲೂಕು ಕೇಂದ್ರಗಳಲ್ಲಿ ವೈದ್ಯರ ಕೊರತೆ ಉಂಟಾದಲ್ಲಿ, ನಿವೃತ್ತಿ ವೈದ್ಯರು, ನರ್ಸ್ ಸೇವೆಗೆ ನಿಯುಕ್ತಿಗೊಳಿಸಲಾಗುತ್ತದೆಂದು ಹೇಳಿದರು. ಉಚಿತ ಹಾಲು ವಿತರಣೆಗೆ ಸಂಬಂಧಿಸಿ ಶಾಸಕರು ಪ್ರಸ್ತಾಪಿಸಿ, ಗ್ರಾಮಾಂತರ ಪ್ರದೇಶದಲ್ಲೂ ಹಾಲು ವಿತರಣೆಗೆ ಮನವಿ ಮಾಡಲಾಯಿತು.
ಈ ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ದದ್ದಲ ಬಸವನಗೌಡ, ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಸಿಇಓ ಲಕ್ಷ್ಮೀಕಾಂತ ರೆಡ್ಡಿ ಉಪಸ್ಥಿತರಿದ್ದರು.

Leave a Comment