ಎಲ್ಲಾ ಜನಾಂಗಗಳ ಜನಮನ ಗೆದ್ದ ಏಕೈಕ ನಾಯಕ ವಾಜಪೇಯಿ

ಕೆ.ಆರ್.ಪೇಟೆ, ಆ.18- ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವು, ಸುಭದ್ರ ರಾಷ್ಟ್ರದ ನಿರ್ಮಾಣ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಅಪಾರವಾಗಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಕಂಬನಿ ಮಿಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ತಾಲ್ಲೂಕು ರೈತ ಸಂಘ, ತಾಲೂಕು ಪ್ರೆಸ್ ಕ್ಲಬ್, ಹಾಗೂ ರಾಯಲ್ ಲೇಡಿಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
3 ಭಾರಿ ಪ್ರಧಾನಿಯಾಗಿ ದೇಶಕ್ಕೆ ಸರ್ವಶ್ರೇಷ್ಠ ಆಡಳಿತ ನೀಡಿದ್ದ ವಾಜಪೇಯಿಯವರು ಎಲ್ಲಾ ಧರ್ಮದವರ ಹಾಗೂ ಎಲ್ಲಾ ಜನಾಂಗಗಳ ಜನಮನ ಗೆದ್ದ ಏಕೈಕ ಬಿಜೆಪಿ ನಾಯಕರಾಗಿದ್ದರು. ಗ್ರಾಮೀಣ ಪ್ರದೇಶದ ಸಮಗ್ರವಾದ ಅಭಿವೃದ್ಧಿಯ ಕನಸು ಕಂಡಿದ್ದ ವಾಜಪೇಯಿ ಅವರು ದೇಶದ ರಸ್ತೆಗಳ ಅಭಿವೃದ್ದಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ದೇಶದಾಧ್ಯಂತ ಅನುಷ್ಠಾನಗೊಳಿಸಿದರು. ಅಮೇರಿಕಾ ರಾಷ್ಟ್ರದ ಭಾರೀ ವಿರೋಧದ ನಡುವೆಯೂ ಫೋಕ್ರಾನ್‍ನಲ್ಲಿ ಅಣ್ವಸ್ತ್ರ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದ್ದರು. ಭಾರತ ದೇಶದ ಸಾಧನೆಯನ್ನು ವಿಶ್ವಮಟ್ಟದಲ್ಲಿ ಬೆಳಕಿಗೆ ತಂದರು. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಸರ್ಕಾರವು ಬಿದ್ದು ಹೋಗುವ ಬಗ್ಗೆ ತಿಳಿದಿದ್ದರೂ ಕುದುರೆ ವ್ಯಾಪಾರವನ್ನು ನಡೆಸಿ ಸರ್ಕಾರವನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಸಹ ಮಾಡಲಿಲ್ಲ. ಬದಲಾಗಿ ಪಕ್ಷವನ್ನು ಪುನರ್ ಸಂಘಟಿಸಿ ಪೂರ್ಣವಧಿಗೆ ಅಧಿಕಾರಕ್ಕೆ ತಂದು ಪ್ರಧಾನಿಗಳಾಗಿ ಉತ್ತಮ ಆಡಳಿತ ನೀಡಿದರು. ಪ್ರಜಾತಂತ್ರದ ತತ್ವಗಳು ಹಾಗೂ ಸಿದ್ಧಾಂತಗಳ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದರು. ಸರ್ವ ಶಿಕ್ಷಣ ಅಭಿಯಾನ, ಉದ್ಯೋಗಖಾತ್ರಿ ಅವರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು ಇಂದು ಸಹ ಮುಂದುವರೆಯುತ್ತಿದೆ. ರಾಜಕಾರಣದ ನಡುವೆ ಕವಿಯಾಗಿ, ಪತ್ರಕರ್ತನಾಗಿ, ವಿರೋಧಪಕ್ಷದ ನಾಯಕನಾಗಿ, ದೇಶದ ಪ್ರಧಾನ ಮಂತ್ರಿಯಾಗಿ ತಮ್ಮದೇ ಛಾಪನ್ನು ಮೂಡಿಸಿದ ಅಟಲ್‍ಜೀ ಅವರು ತಮ್ಮ ಸರಳತೆ, ಸಜ್ಜನಿಕೆ ಹಾಗೂ ತತ್ವ ಸಿದ್ಧಾಂತಗಳ ಪಾಲನೆಗಾಗಿ ವಿಶ್ವವಿಖ್ಯಾತರಾಗಿದ್ದಾರೆ. ವಾಜಪೇಯಿ ಅವರ ನಿಧನದಿಂದಾಗಿ ದೇಶವು ಒಬ್ಬ ಪ್ರಬುದ್ಧ ರಾಜಕೀಯ ನೇತಾರನನ್ನು ಕಳೆದುಕೊಂಡಿದೆ. ದೇಶದಲ್ಲಿರುವ ನದಿಗಳನ್ನು ಜೋಡಣೆ ಮಾಡುವ ಕನಸು ಕಂಡಿದ್ದ ಅಟಲ್‍ಜೀ ಅವರ ನಿಧನ ತುಂಬಾ ನೋವು ತಂದಿದೆ ಎಂದು ರಾಜೇಗೌಡ ದುಃಖಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ, ಪ್ರಗತಿಪರ ಚಿಂತಕ ಕತ್ತರಘಟ್ಟ ವಾಸು, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹರಿಚರಣತಿಲಕ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಪ್ರೆಸ್ ಕ್ಲಬ್‍ನ ತಾಲೂಕು ಅಧ್ಯಕ್ಷ ಆರ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿಂ.ಕಾ.ಸುರೇಶ್, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಕೆ.ಎಸ್.ಚಂದ್ರು, ತಾಲ್ಲೂಕು ರಾಯಲ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಲತಾಮುರುಳೀಧರ್, ಕಾರ್ಯದರ್ಶಿ ಅಶ್ವತ್ಥಲಕ್ಷ್ಮೀ, ಪದಾಧಿಕಾರಿಗಳಾದ ಪ್ರಮೀಳಾ ವರದರಾಜೇಗೌಡ, ಕಲ್ಪನಾ, ರಾಣಿ, ಮತ್ತಿಘಟ್ಟ ಲತಾ, ತಾಲೂಕು ರೈತ ಸಂಘದ ಹಿರಿಯ ಮುಖಂಡರಾದ ಲಕ್ಷ್ಮೀಪುರ ಜಗಧೀಶ್, ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಬಿ.ಆರ್.ಪ್ರಸನ್ನ, ನೀತಿಮಂಗಲ ಮಹೇಶ್, ಕರೋಠಿ ತಮ್ಮಯ್ಯ, ಪ್ರೆಸ್ ಕ್ಲಬ್‍ನ ಪದಾಧಿಕಾರಿಗಳಾದ ಎಂ.ಎಸ್.ಬಸವರಾಜು, ಕೆ.ಎಸ್.ಸತೀಶ್, ಕಿರಣ್, ಜಿ.ಕೆ.ಪ್ರದೀಪ್ ಮತ್ತಿತರರು ಭಾಗವಹಿಸಿದ್ದರು.

Leave a Comment