ಎಲೆಕ್ಷನ್ ಬಾಂಡ್ ಎಂದರೇನು: ಯೋಜನೆಗೆ ಕಾಂಗ್ರೆಸ್ ವಿರೋಧವೇಕೆ

ನವದೆಹಲಿ, ನ..21: ಎಲೆಕ್ಷನ್ ಬಾಂಡ್, ಎಲೆಕ್ಷನ್ ಬಾಂಡ್. ಕೇಂದ್ರ ಸರ್ಕಾರದ ಈ ಯೋಜನೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿದೆ. ಕೋಟಿ ಕೋಟಿ ಹಣವನ್ನು ಲೂಟಿ ಹೊಡೆಯಲು ಬಿಜೆಪಿಗರು ಮಾಡಿರುವ ಪ್ಲಾನ್ ಇದು ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಇಂದು ಲೋಕಸಭೆಯಲ್ಲಿ ಚುನಾವಣೆ ಬಾಂಡ್ ವಿಚಾರವೇ ಸದ್ದು ಮಾಡಿತು. ಶೂನ್ಯ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ಚುನಾವಣೆ ಬಾಂಡ್ ಚುನಾವಣಾ ಅವಧಿಗಷ್ಟೇ ಸೀಮಿತವಾಗುತ್ತಿದೆ. ಈ ಚುನಾವಣಾ ಬಾಂಡ್ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಕೊನೆಗೆ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಚುನಾವಣಾ ಬಾಂಡ್ ವಿಷಯವನ್ನೇ ಅಸ್ತ್ರವಾಗಿಟ್ಟುಕೊಂಡು ಕಲಾಪವನ್ನು ಬಹಿಷ್ಕರಿಸಲಾಯಿತು.
ಚುನಾವಣಾ ಬಾಂಡ್ ಅಲ್ಲ, ಹಗರಣಗಳ ಬಾಂಬ್!
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಚುನಾವಣಾ ಬಾಂಡ್ ಹಗರಣಗಳ ಕೂಪವಾಗಿದೆ ಎಂದು ಮನೀಷ್ ತಿವಾರಿ ಆರೋಪಿಸಿದರು. ಬ್ಲಾಕ್ ಮನಿಯನ್ನು ವೈಟ್ ಮಾಡಲು ಬಿಜೆಪಿ ಸರ್ಕಾರ ಈ ಯೋಜನೆ ರೂಪಿಸಿದೆ. ಚುನಾವಣಾ ಬಾಂಡ್ ಭ್ರಷ್ಟಾಚಾರದ ಅಧಿಕೃತ ಮಾರ್ಗವಾಗಿದೆ. ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಗಳಿಂದ ಪಡೆದ ಹಣದ ಲೆಕ್ಕವನ್ನು ಸದನಕ್ಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ ಪಟ್ಟು ಹಿಡಿದರು.
ಎಲೆಕ್ಷನ್ ಬಾಂಡ್ ಓಕೆ, ಕಾಂಗ್ರೆಸ್ ವಿರೋಧವೇಕೆ?
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಕೆಲವು ಕಂಪನಿಗಳು ಚುನಾವಣಾ ಬಾಂಡ್ ಗಳನ್ನು ಖರೀದಿಸುತ್ತವೆ. ಹೀಗೆ ಬಾಂಡ್ ಮೂಲಕ ದೇಣಿಗೆ ನೀಡಿದ ದೇಣಿಗೆದಾರರ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಇದರಿಂದ ಕಪ್ಪುಹಣವೆಲ್ಲ ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ, ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ದೇಶದ ಶೇ.90ರಷ್ಟು ಉದ್ಯಮಗಳು ಕೆಲವೇ ಕೆಲವು ಕಂಪನಿಗಳ ಮೂಲಕ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಗಲಾಮ್ ನಬಿ ಆಜಾದ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಬಿಜೆಪಿಗರ ಉತ್ತರವೇನು?
ಚುನಾವಣಾ ಬಾಂಡ್ ಭ್ರಷ್ಟಾಚಾರದ ಕೂಪವಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. 2018ರ ಜನವರಿ 2ರಂದು ಕೇಂದ್ರ ಸರ್ಕಾರ ಘೋಷಿಸಿದ ಎಲೆಕ್ಷನ್ ಬಾಂಡ್, ಜಾಗೃತ ಚುನಾವಣಾ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ದೇಶದ ಚುನಾವಣೆಗಳಲ್ಲಿ ನ್ಯಾಯಸಮ್ಮತ ಹಾಗೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಈ ನೀತಿಯಿಂದ ಸಾಧ್ಯವಾಗುತ್ತದೆ. ದಾನಿಗಳ ಹೆಸರು ಹಾಗೂ ಸಂಪೂರ್ಣ ವಿವರ ಬ್ಯಾಂಕ್ ನಲ್ಲಿ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.
ಬಾಂಡ್ ಬಗ್ಗೆ ಚುನಾವಣಾ ಆಯೋಗ ಹೇಳೋದೇನು?
ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಅಡಿ ನೊಂದಣಿಯಾದ ರಾಜಕೀಯ ಪಕ್ಷಗಳಷ್ಟೇ ಈ ಚುನಾವಣಾ ಬಾಂಡ್ ಗಳನ್ನು ಪಡೆದುಕೊಳ್ಳಬಹುದು. ಇಂಥ ಪಕ್ಷಗಳು ತಮ್ಮ ಅಧಿಕೃತ ಖಾತೆಗಳ ಮೂಲಕ ಬಾಂಡ್ ಗಳನ್ನು ನಗದೀಕರಣಗೊಳಿಸಬಹುದು. ದಾನಿಗಳಿಂದ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ಪಡೆಯಬಹುದು. ಆದರೆ, ಬಾಂಡ್ ಗಳ ಮೂಲಕ ಪಡೆದ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯವಿರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಇದೇ ವೇಳೆ ಸರ್ಕಾರಿ ಸಂಸ್ಥೆಗಳು ಹಾಗೂ ವಿದೇಶಿ ಮೂಲಗಳಿಂದ ದೇಣಿಗೆ ಪಡೆಯುವುದನ್ನು ಆಯೋಗ ನಿಷೇಧಿಸಿದೆ.
ಚುನಾವಣಾ ಬಾಂಡ್ ಯೋಜನೆ ಎಂದರೇನು?
ಯಾವುದೇ ವ್ಯಕ್ತಿ, ಸಂಸ್ಥೆ ಹಾಗೂ ಕಂಪನಿಗಳು ಚುನಾವಣೆ ಸಮಯದಲ್ಲಿ ತಮ್ಮಿಷ್ಟದ ರಾಜಕೀಯ ಪಕ್ಷಕ್ಕೆ ಈ ಎಲೆಕ್ಷನ್ ಬಾಂಡ್ ಮೂಲಕ ದೇಣಿಗೆ ನೀಡಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಬ್ರಾಂಚ್ ಗಳಲ್ಲಿ ಈ ಎಲೆಕ್ಷನ್ ಬಾಂಡ್ ಗಳನ್ನು ನೀಡಲಾಗುತ್ತದೆ. 1 ಸಾವಿರದಿಂದ 10 ಸಾವಿರ, 1 ಲಕ್ಷ ದಿಂದ 10 ಲಕ್ಷ ರೂಪಾಯಿ ಹಾಗೂ 1 ಕೋಟಿ ರೂಪಾಯಿವರೆಗೂ ಬಾಂಡ್ ಗಳನ್ನು ಖರೀದಿಸಬಹುದು. ಮೂರು ತಿಂಗಳಿನಲ್ಲಿ 10 ದಿನ ಬ್ಯಾಂಕ್ ನಲ್ಲಿ ಈ ರೀತಿಯ ಚುನಾವಣಾ ಬಾಂಡ್ ಗಳನ್ನು ವಿತರಿಸಲಾಗುತ್ತದೆ.

15 ದಿನಗಳವರೆಗೂ ಈ ಬಾಂಡ್ ಗಳನ್ನು ನಗದೀಕರಿಸಿಕೊಳ್ಳುವ ಅವಕಾಶ ರಾಜಕೀಯ ಪಕ್ಷಗಳಿಗೆ ಇರುತ್ತದೆ. ಆದರೆ, ಇದಕ್ಕೂ ಮೊದಲು ಬಾಂಡ್ ಖರೀದಿಸುವ ವ್ಯಕ್ತಿ ಅಥವಾ ಕಂಪನಿ ತಮ್ಮ ಸ್ವವಿವರವನ್ನು ಬ್ಯಾಂಕ್ ನಲ್ಲಿ ನೀಡಬೇಕಾಗಿರುತ್ತದೆ.

Leave a Comment