ಎಲೆಕ್ಟ್ರಿಕ್ ಬಸ್‌ಗಳ ಖರೀದಿ ಲೋಕಾ ತನಿಖೆಗೆ ಆಗ್ರಹ

ಬೆಂಗಳೂರು, ಅ. ೧೧- ನಗರ ಸಾರಿಗೆ ಸಂಸ್ಥೆಗೆ ಅಗತ್ಯವಿರುವ ಎಲೆಕ್ಟ್ರಿಕ್ ಬಸ್‌ಗಳ ಖರೀದಿಯಲ್ಲಿ ಬಿಎಂಟಿಸಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮಾಡಿರುವ ಆರೋಪದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟ, ಬಸ್‌ಗಳ ಖರೀದಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಾರಿಗೆ ಸಚಿವರು, ಈ ರೀತಿಯ ಬೇಜವಾಬ್ದಾರಿ ಹೇಳಿಕೆಯನ್ನು ನೀಡಬಾರದಿತ್ತು. ಸಚಿವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಬಿಎಂಟಿಸಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಸಚಿವರ ಆರೋಪದಿಂದ ಅಧಿಕಾರಿಗಳ ತೇಜೋವಧೆಯಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಈ ಸಂಬಂಧ ಸಾರಿಗೆ ಸಚಿವರಿಗೆ ಪತ್ರ ಬರೆದಿರುವ ಅವರು, ಎಲೆಕ್ಟ್ರಿಕ್ ಬಸ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ, ಲೋಕಾಯುಕ್ತ ತನಿಖೆಗೆ ವಹಿಸಬೇಕು, ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದೆಂದು ಅವರು ಒತ್ತಾಯಿಸಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ 80 ಬಸ್ಸ್‌ಗಳ ಖರೀದಿಗೆ ಟೆಂಡರ್ ಪೂರ್ಣಗೊಳಿಸಲಾಗಿತ್ತು. ಟೆಂಡರ್ ಪಡೆದ ಕಂಪನಿ ಪ್ರಸ್ತುತ 80 ಬಸ್‌ಗಳನ್ನು ಸಿದ್ದಪಡಿಸಿದೆ. ಎಲೆಕ್ಟ್ರಿಕ್ ಬಸ್‌ಗಳ ಖರೀದಿಯಿಂದ ಸಾರಿಗೆ ಸಂಸ್ಥೆಗೆ ನಷ್ಟವುಂಟಾಗುವುದು ಕಂಡು ಬಂದರೆ, ಟೆಂಡರ್ ರದ್ದು ಮಾಡಲು ಸಾರಿಗೆ ಸಂಸ್ಥೆಗೆ ಅಧಿಕಾರವಿದೆ ಎಂಬುದನ್ನು ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಬಸ್ ಖರೀದಿಗೆ ಅಧಿಕಾರಿಗಳು ಲಂಚ ಪಡೆದಿರಬಹುದು ಎಂಬ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಸಾರಿಗೆ ಇಲಾಖೆಯ ಅಧಕಾರಿಗಳ ವರ್ಗಾವಣೆಯಲ್ಲಿಯೂ ಭ್ರಷ್ಠಾಚಾರ ನಡೆದಿರುವುದಾಗಿ ಕೇಳಿಬಂದಿದೆ. ಕಾರಣ ನನ್ನ ಗಮನಕ್ಕೆ ಬಾರದೆ ಸಾರಿಗೆ ನಿಗಮಗಳಲ್ಲಿ ಯಾವುದೇ ವರ್ಗಾವಣೆ ಮಾಡಬಾರದೆಂದು ತಾವು ನೀಡಿರುವ ಸೂಚನೆ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಬೇಸರ ಉಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಸಾರಿಗೆ ಸಚಿವರು ಇಂತಹ ಆಜ್ಞೆ ಹೊರಡಿಸಿರಲಿಲ್ಲ. ವರ್ಗಾವಣೆ ಆಡಳಿತಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ನಿಮ್ಮ ನೇರ ಹಸ್ತಕ್ಷೇಪ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಕೇಳಿ ಬಂದಿರುವ ಭ್ರಷ್ಟಾಚಾರ ಕುರಿತಂತೆಯೂ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Comment