ಎರಡು ವರ್ಷದ ಮಗು ಅಪಹರಣ! ಕುಂದಾಪುರದಲ್ಲಿ ನಡೆದ ಆತಂಕಕಾರಿ ಕೃತ್ಯ

ಉಡುಪಿ, ಜು.೧೧- ತಾಯಿ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಎರಡು ವರ್ಷ ಪ್ರಾಯದ ಹೆಣ್ಣು ಮಗುವನ್ನು ಇಬ್ಬರು ದುಷ್ಕರ್ಮಿಗಳು ಅಪಹರಿಸಿದ ಘಟನೆ ಇಂದು ನಸುಕಿನ ೪ ಗಂಟೆಯ ಸುಮಾರಿಗೆ ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ನಡೆದಿದೆ. ತೀರಾ ಗ್ರಾಮೀಣ ಪ್ರದೇಶವಾಗಿರುವ ಎಡಮೊಗೆ ಗ್ರಾಮದ ಕುಮ್ಟಿ ಬೇರು ಸಂತೋಷ ನಾಯ್ಕ ಎಂಬವರ ಎರಡು ವರ್ಷ ಪ್ರಾಯದ ಹೆಣ್ಣುಮಗುವನ್ನು ಅಪಹರಣ ಮಾಡಲಾಗಿದ್ದು ಪ್ರಕರಣ ಇನ್ನೂ ನಿಗೂಢವಾಗಿದೆ.
ಸಂತೋಷ್ ನಾಯ್ಕರ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ್ದು ನಸುಕಿನ ೪ ಗಂಟೆಯ ಸುಮಾರಿಗೆ ಮನೆಯ ಎಡಬಾಗಿಲಿನಿಂದ ಒಳಪ್ರವೇಶಿದ ದುಷ್ಕರ್ಮಿಗಳು ಎರಡು ವರ್ಷ ಪ್ರಾಯದ ಹೆಣ್ಣು ಮಗುವನ್ನು ಮಾತ್ರ ಅಪಹರಿಸಿ ಕೊಂಡೊಯ್ದಿದ್ದಾರೆ. ಈ ವೇಳೆ ತಾಯಿ ಎಚ್ಚರವಾಗಿದ್ದು ಮಗುವಿಗಾಗಿ ದುಷ್ಕರ್ಮಿಗಳನ್ನು ಹಿಂಬಾಲಿಸುತ್ತಾ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಮುಸುಕುಧಾರಿಗಳು ಮಗು ಸಮೇತ ತುಂಬಿ ಹರಿಯುವ ಕುಬ್ಜಾ ನದಿಗೆ ಹಾರಿದ್ದು ಬಳಿಕ ಈಜುತ್ತಾ ನದಿಯನ್ನು ದಾಟಿ ಹೊಸಂಗಡಿಯತ್ತಾ ಪರಾರಿಯಾಗಿದ್ದಾರೆ. ಘಟನೆಗೆ ಕಾರಣ ನಿಗೂಢವಾಗಿದ್ದು ಶಂಕರನಾರಾಯಣ ಠಾಣಾ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿದ್ದಾರೆ.

Leave a Comment