ಎರಡು ದಿನಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಹುಬ್ಬಳ್ಳಿ, ಜ.20- ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ವಿ.ಪ ಸದಸ್ಯ ಪ್ರದೀಪ್ ಶೆಟ್ಟರ್‌ ಚಾಲನೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ ಕ್ಷಮತಾ ಆಶ್ರಯದಲ್ಲಿ ನಗರದ ಹೊರವಲಯದ ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಪಕ್ಕದ ಬೃಹತ್ ಮೈದಾನದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲಾಸ ನಾಯಕ್ ಸ್ಪೀಡ್ ಪೆಂಟಿಂಗ್ ಮೂಲಕ ಜನರ ಗಮನ ಸೆಳೆಯಿತು.

ವಿವಿಧ ಆಕೃತಿಗಳ ಬೃಹತ್ ಆಕಾರದ ಗಾಳಿಪಟಗಳು ನೋಡುಗರನ್ನು ಸೆಳೆದು ಬಾನಂಗಳದಲ್ಲಿ ಆಕರ್ಷಕ ಚಿತ್ತಾರವನ್ನು ಮೂಡಿಸಿದವು.
ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸ್ಪರ್ಧಾ ಮನೋಭಾವ ತೋರಿದರು. ಇನ್ನು ಮಕ್ಕಳು ವಿವಿಧ ಚಿತ್ರಗಳನ್ನು ಬಿಡಿಸಿದರು. ಸಂಜೆ  6 ರಿಂದ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ ಹಾಗೂ ಗಾಯಕ ವಿಜಯ ಪ್ರಕಾಶ, ಅರ್ಚನಾ ಉಡುಪ ಹಾಗೂ ತಂಡದಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಎಲ್ಲ ವರ್ಗದ ಜನರು ಒಂದೆ ಕಡೆ ಸೇರಬೇಕು ಎಂಬ ಸದುದ್ದೇಶದಿಂದ ಗಾಳಿಪಟ ಉತ್ಸವವನ್ನು ಮಾಡಲಾಗುತ್ತದೆ. ಎಲ್ಲರ ಕ್ಷೇಮವನ್ನು ಭಯಸುವ ಸಂಸ್ಥೆಯಾಗಿರುವುದು ಕ್ಷಮತಾ ಸಂಸ್ಥೆ. ಈ ಹಿನ್ನೆಲೆಯಲ್ಲಿ ಕ್ಷಮತಾ ಸಂಸ್ಥೆ ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಆಟಗಳು ಜನರನ್ನು ಒಗ್ಗೂಡಿಸುವ ಹಾಗೂ ಏಕತೆ ಮನೋಭಾವನೆ ಬೆಳೆಸುವ ಮಾರ್ಗವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣದ ಜಂಜಾಟದಲ್ಲಿ ಜನಪದ ಕಲೆಗಳಿಂದ ಜನರು ದೂರ ಉಳಿಯುತ್ತಿದ್ದಾರೆ. ಆರೋಗ್ಯಯುತ ಜೀವನಕ್ಕೆ ಕ್ರೀಡೆ ಅತಿ ಅವಶ್ಯಕವಾಗಿದೆ. ಆಟಗಳಿಂದ ಸಾಮಾಜಿಕ ಜೀವನ ಸೃಷ್ಟಿಯಾಗುತ್ತದೆ ಎಂದು ಹು-ಧಾ ಮಹಾನಗರ ಪೊಲೀಸ್ ಕಮೀಷನರ್ ಆರ್.ದೀಲಿಫ್ ಹೇಳಿದರು.
ನಾಳೆ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ದೇಶ ವಿದೇಶಗಳ ಪ್ರಸಿದ್ದ ಗಾಳಿಪಟ ಕ್ರೀಡಾ ಪಟುಗಳಿಂದ ಗಾಳಿಪಟ ಹಾರಾಟ ಪ್ರದರ್ಶನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಸ್ಪರ್ಧೆ ಹಾಗೂ ಪ್ರದರ್ಶನ, ಸಂಜೆ 5.30 ಕ್ಕೆ ಉತ್ಸವದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯ ಸಂಜೆ‌ ಕಾರ್ಯಕ್ರಮ ನಡೆಯಲಿದೆ.

Leave a Comment