ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ

ಬೆಂಗಳೂರು ಫೆ.೨೦-ಜಾಗತಿಕ ಮಟ್ಟದ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಗಳ ಜೊತೆಗೂಡಿ ರಾಜ್ಯದ ೪ ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ಸ್ ಕ್ಲಸ್ಟರ್ ನಿರ್ಮಿಸಲು ಸರಕಾರ ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
“ಜಾಗತಿಕ ಮಟ್ಟದ ವಿದ್ಯುನ್ಮಾನ ವಿನ್ಯಾಸ ಮತ್ತು ಉತ್ಪಾದನಾ ಕ್ಲಸ್ಟರ್‌ಗಳ ಸ್ಥಾಪನೆಗೆ ಅವಶ್ಯವಿರುವ ಪ್ರಮುಖ ವ್ಯವಸ್ಥೆಗಳ ಕುರಿತ” ಕಾರ್ಯಾಗಾರ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಯ ಅಭಿವೃದ್ದಿಗೆ ರಾಜ್ಯ ಸರಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆ ಈ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ರೂಪಿಸುತ್ತಿದೆ ಎಂದರು.
ಕ್ಲಸ್ಟರ್ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಅಡಿಯಲ್ಲಿ ವಿದ್ಯುನ್ಮಾನ ವಿನ್ಯಾಸ ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವ ಕೈಗಾರಿಕೆಗಳನ್ನು ಸೆಳೆಯಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇಂದು ಜಾಗತಿಕ ವಲಯದಲ್ಲಿ ಹೆಸರನ್ನು ಮೂಡಿಸಿರುವ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸುತ್ತಿರುವುದು ಬಹಳ ಸಂತಸ ತಂದಿದೆ.
ಈ ಚರ್ಚೆಯ ನಂತರ ಈ ಕ್ಷೇತ್ರದ ಕೈಗಾರಿಕೆಗಳಿಗೆ ಅವಶ್ಯಕತೆ ಇರುವ ಅನುಕೂಲಗಳು ಹಾಗೂ ತೊಂದರೆಗಳನ್ನು ನಿವಾರಿಸಲು ಕ್ರಮಗಳನ್ನ ಕೈಗೊಳ್ಳಲಾಗುವುದು. ಜಾಗತಿಕ ಮಟ್ಟದ ೮೭ ಕ್ಕೂ ಹೆಚ್ಚು ಕಂಪನಿಗಳ ಜೊತೆ ಚರ್ಚೆ ನಡೆಸಿದ್ದು, ೧೦ ಕ್ಕೂ ಹೆಚ್ಚು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ ಕರ್ನಾಟಕ ರಾಜ್ಯ ಚಿಪ್ ಡಿಸೈನ್ ಕ್ಷೇತ್ರದಲ್ಲಿ ದೇಶದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ರಾಜ್ಯ ಸರಕಾರ ದೇಶದ ಎಲೆಕ್ಟ್ರಾನಿಕ್ ಡಿಸೈನ್ ನಲ್ಲಿ ಶೇಕಡಾ ೪೦ ರಷ್ಟು ಹಾಗೂ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಶೇಕಡಾ ೩೦ ರಷ್ಟು ಕೊಡಗೆಯನ್ನು ನೀಡುತ್ತಿದೆ. ದೇಶದ ಶೇಕಡಾ ೩೦ ರಷ್ಟು ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳು ರಾಜ್ಯದಲ್ಲಿವೆ. ಕರ್ನಾಟಕ ರಾಜ್ಯ ದೇಶದಲ್ಲಿ ಅಷ್ಟೇ ಅಲ್ಲದೆ ಜಾಗತಿಕವಾಗಿ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ವಿಶಿಷ್ಟ ಸ್ಥಾನ ಹೊಂದುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಮೈಸೂರು ಮಂಚೂಣಿಗೆ ಬಂದಿದ್ದು, ಧಾರವಾಡದಲ್ಲಿ ನವ ಅನ್ವೇಷನೆಗೆ ಒತ್ತು ನೀಡಲಾಗಿದೆ ಈ ವಲಯದಲ್ಲಿ ಹೂಡಿಕೆ ಮಾಡಲು ಮುಂದಾಗುವ ಹೂಡಿಕೆದಾರರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೆರವು ಮತ್ತು ವಿಶ್ವದರ್ಜೆಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಕ್ರಮವಹಿಸಲಿದೆ ಎಂದರು.
ಇ.ಎಸ್.ಡಿ.ಎಂ ಕ್ಲಸ್ಟರ್ ಗಳ ಅಭಿವೃದ್ದಿಗಾಗಿ ವಿವಿಧ ಜಿಲ್ಲೆಗಳಲ್ಲಿ ಒಂದು ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. ಈ ವಲಯಕ್ಕೆ ಅಗತ್ಯವಾಗಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಒದಗಿಸಲು ಐಟಿಐ ಮತ್ತಿತರ ವೃತ್ತಿ ಆಧರಿತ ಕೋರ್ಸ್ ಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಸರ್ಕಾರ ಮತ್ತು ಕೈಗಾರಿಕೋದ್ಯಮಿಗಳು ಒಟ್ಟಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಈ ಕ್ಷೇತ್ರದ ಅಭ್ಯುದಯ ಸಾಧ್ಯ ಎಂದು ಗೌರವ್ ಗುಪ್ತ ಪ್ರತಿಪಾದಿಸಿದರು.
ಕೈಗಾರಿಕಾ ಇಲಾಖೆ ಆಯುಕ್ತೆ ಗಂಜನ್ ಕೃಷ್ಣ ಮಾತನಾಡಿ, ೪ ಜಿಲ್ಲೆಗಳಲ್ಲಿ ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳ ಸ್ಥಾಪನೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು

Leave a Comment