ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ತಿಪಟೂರು, ಜು. ೧- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ  ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ. ಲಾಕ್‌ಡೌನ್ ಮುಂದಿಟ್ಟುಕೊಂಡು ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣೆ ಕಾಯ್ದೆ 2003 ವಿದ್ಯುತ್ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡುತ್ತಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಆಡಳಿತಕ್ಕೆ ಸಾಕ್ಷಿಯಾಗಿದೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸದೆ ಜನಾಭಿಪ್ರಾಯಕ್ಕೆ ವಿರುದ್ದವಾದ ಕಾನೂನು ಜಾರಿಮಾಡುವ ಕೆಲಸ ಮಾಡಲಾಗುತ್ತಿದೆ. ಉಳುವವನೇ ಭೂಮಿಯ ಒಡೆಯ ಎನ್ನುವ ಘೋಷಣೆಯನ್ನು ಗಾಳಿಗೆ ತೂರಿ  ಉಳ್ಳವನ್ನೆ ಭೂಮಿಯ ಒಡೆಯ ಎನ್ನುವ ಸಿದ್ದಾಂತದ ಮೂಲಕ ಕಾರ್ಪೋರೇಟ್ ಕಂಪೆನಿಗಳ ರಕ್ಷಣೆಗೆ ನಿಂತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ರೈತ ಕೃಷಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಎಸ್.ಕೆ. ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದ್ದು,

ಜನರ ಹಕ್ಕುಗಳನ್ನು ಕಸಿದುಕೊಂಡು ಸುಗ್ರೀವಾಜ್ಞೆ ಮೂಲಕ ಜನಾಭಿಪ್ರಾಯವಿಲ್ಲದೆ ಕಾಯ್ದೆ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ.

ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕೃಷಿಯನ್ನೇ ನಂಬಿ ಬದುಕುತಿದ್ದ ರೈತರು ಕಾರ್ಪೋರೇಟ್ ಕಂಪೆನಿಗಳಿಗೆ ಕೃಷಿ ಜಮೀನು ಮಾರಿಕೊಂಡು ಬೀದಿಗೆ ಬೀಳುವ ಆತಂಕ ಎದುರಾಗಿದೆ ಎಂದರು.

ರೈತ ವಿರೋಧಿ ಪ್ರತಿಗಾಮಿ ಭೂಸುಧಾರಣೆ ಕಾಯ್ದೆ ಕೈಬಿಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳು, ಭಾಗ್ಯಜ್ಯೋತಿ, ಕುಟೀರ ಜ್ಯೋತಿಗಳಿಗೆ ಉಚಿತವಾಗಿ ನೀಡುವ ಯೋಜನೆ ನಿಲ್ಲಿಸಿ ಕಾರ್ಪೋರೇಟ್ ಕಂಪೆನಿಗಳಿಗೆ ನೀಡುವ ಉದ್ದೇಶದಿಂದ 2003 ಕಾಯ್ದೆಗೆ ತಿದ್ದುಪಡಿ ರೂಪಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬೀಜೋಧ್ಯಮವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ನೀಡಲು ಉದ್ದೇಶಿಸಿ ತರಲಾದ ಬೀಜ ಕಾಯ್ದೆ 2019 ನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿದ್ದು,  ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಕೇಳಿದರೆ ಉಸ್ತುವಾರಿ ಸಚಿವರು ರೈತ ಮುಖಂಡರ ಬಗ್ಗೆ ಉಡಾಫೆಯಾಗಿ ಮಾತನಾಡುತ್ತಾರೆ.

ರೈತ ಕುಟುಂಬದಿಂದ ಬಂದ ಇವರು ರೈತರ ಪರವಾಗಿ ಕೆಲಸ ಮಾಡಬೇಕು. ಕೊಬ್ಬರಿಗೆ ಸೂಕ್ತ ಬೆಲೆ ದೊರೆಯುವಂತೆ ಮಾಡಬೇಕು . ರಾಷ್ಟೀಯ ಹೆದ್ದಾರಿ ಹಾಗೂ ಎತ್ತಿನ ಹೊಳೆ ಯೋಜನೆಗಳಿಗೆ ಭೂಮಿ ಕಳೆದುಕೊಳ್ಳುತ್ತಿರುವ ಭೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಬೆನ್ನಾಯ್ಕನಹಳ್ಳಿ ದೇವರಾಜು, ಬಸ್ತಿಹಳ್ಳಿ ರಾಜಣ್ಣ, ಬೈರನಾಯ್ಕನಹಳ್ಳಿ ಲೋಕೇಶ್, ಮನೋಹರ್ ಪಾಟೇಲ್, ಶ್ರೀಕಾಂತ್ ಕೆಳಹಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Share

Leave a Comment