ಎಪಿಎಂಸಿ : ನೇರ ವ್ಯಾಪಾರ – ಹಮಾಲರ ಆಕ್ಷೇಪ

ರಾಯಚೂರು.ಏ.07- ಕೃಷಿ ಉತ್ಪನ್ನ ಮಾರುಕಟ್ಟೆ ನೇರ ಮಾರಾಟ ಹಮಾಲರ ಪಾಲಿಗೆ ಭಾರೀ ನಷ್ಟಕ್ಕೆ ದಾರಿ ಮಾಡಿದ್ದರಿಂದ ಇಂದು ವ್ಯಾಪಾರಕ್ಕೆ ತಕರಾರು ವ್ಯಕ್ತಪಡಿಸಿದ ಘಟನೆ ನಡೆಯಿತು.
ಎಪಿಎಂಸಿ ಪ್ರಾಂಗಣದಲ್ಲಿ ಯಾವುದೇ ರಾಶಿ ಮಾಡದೇ, ಕೃಷಿ ಉತ್ಪನ್ನ ಮಾರಾಟ ಮಾಡುವ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ರೈತರು ಮತ್ತು ವ್ಯಾಪಾರಿಗಳು ನೇರ ವ್ಯವಹಾರಕ್ಕೆ ಮುಂದಾಗಿದ್ದರು. ಆದರೆ, ಹಮಾಲರು ಈ ರೀತಿಯ ವ್ಯಾಪಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷಿ ಉತ್ಪನ್ನ ರಾಶಿ ಮಾಡದಿದ್ದರೇ, ತಮಗೆ ಆರ್ಥಿಕ ನಷ್ಟವಾಗುತ್ತಿರುವುದರಿಂದ ಆತಂಕದಿಂದ ಗಂಜ್ ವ್ಯವಹಾರಕ್ಕೆ ತಡೆಯೊಡ್ಡಿದ್ದರು. ಒಂದು ವೇಳೆ ನೇರ ವ್ಯಾಪಾರ ವಹಿವಾಟು ನಡೆಸಿದರೇ, ತಮಗೆ ಬರಬೇಕಾದ ಹಮಾಲಿ ಪಾವತಿಸಬೇಕೆಂದು ಅವರು ಪಟ್ಟು ಹಿಡಿದರು.
ಈ ಆಕ್ಷೇಪ ನಿನ್ನೆಯಿಂದಲೂ ಮುಂದುವರೆದಿತ್ತು. ಆದರೆ, ನಿನ್ನೆ ಮಹಾವೀರ ಜಯಂತಿ ಅಂಗವಾಗಿ ಬಂದ್ ಹಿನ್ನೆಲೆಯಲ್ಲಿ ಪ್ರಭಾವ ಬೀರಲಿಲ್ಲ. ಆದರೆ, ಇಂದು ಪುನಃ ಇದೇ ರೀತಿ ಆಕ್ಷೇಪಣೆ ಗಂಭೀರ ಸಮಸ್ಯೆಗೆ ದಾರಿ ಮಾಡಿದೆ. ಈಗ ಎಪಿಎಂಸಿಯಲ್ಲಿ ಹಮಾಲರು ಮತ್ತು ವ್ಯಾಪಾರಿಗಳ ಮಧ್ಯೆ ಚರ್ಚೆ ಮುಂದುವರೆದಿದೆ. ಸ್ವತಃ ಜಿಲ್ಲಾಧಿಕಾರಿ ಎಪಿಎಂಸಿಗೆ ತೆರಳಿ, ಈ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಿದರು.

Leave a Comment