ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ

ತಿಪಟೂರು, ಮೇ ೨೪- ರೈತರು ಬೆಳೆಯುವ ಬೆಳೆಗಳಿಗೆ ಸೂಕ್ತ ಬೆಲೆಯೊಂದಿಗೆ ತಾಲ್ಲೂಕಿನ ಎಪಿಎಂಸಿಗಳ ಮೂಲಕ ವರ್ತಕರ ಮಧ್ಯಸ್ಥಿಕೆಯಲ್ಲಿ ಮಾರಾಟವಾಗುತ್ತಿದ್ದ ಕಾಯ್ದೆಯನ್ನು ತಿದ್ದಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗುವಂತೆ ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕಾಯಿದೆಯನ್ನು ಹಿಂಪಡೆಯಬೇಕು ಎಂದು ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಲಿಂಗರಾಜು ಆಗ್ರಹಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳಿಗೆ ಅನುಕೂಲಕರವಾದ ನೀತಿಗಳನ್ನು ಅನುಷ್ಠಾನಗೊಳಿಸುವ ಬದಲು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗುವಂತೆ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಈ ನಿಲುವನ್ನು ಕೈ ಬಿಡಬೇಕು ಎಂದರು.

ಕಳೆದ ನಾಲ್ಕು ಕೊಬ್ಬರಿ ಹರಾಜು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು 9600ಕ್ಕೂ ಕಡಿಮೆ ಆಗುತ್ತಿದ್ದು, ಸರ್ಕಾರದ ಬೆಂಬಲ ಬೆಲೆ 10,600 ರೂ.ಗಳಿದ್ದರೂ ಸಹ ನಪೆಡ್‍ನ್ನು ಪ್ರಾರಂಭ ಮಾಡಿರುವುದಿಲ್ಲ. ಈ ಬಗ್ಗೆ ತಾಲ್ಲೂಕಿನ ಶಾಸಕರು ತಮ್ಮದೇ ಸರ್ಕಾರವನ್ನು ಪ್ರಶ್ನಿಸಿ ರೈತರಿಗೆ ಕೇಂದ್ರ ಸರ್ಕಾರದ 10,600 ರೂ.ಗಳ ಜತೆಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡುವ ಮೂಲಕ ಪ್ರತಿ ಕ್ವಿಂಟಾಲ್‍ಗೆ 15,000 ರೂ.ಗಳನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ  ಯಡಿಯೂರಪ್ಪನವರು ರೈತರ ಹಿತ ಕಾಪಾಡಬೇಕಾಗಿತ್ತು. ಅದರೆ ಅವರೆ ರೈತರಿಗೆ ಶಾಪವಾಗಿದ್ದು, ಎಪಿಎಂಸಿ ತಿದ್ದುಪಡಿ ಕಾಯಿದೆಗಳು ತರುವುದು ತರವಲ್ಲ ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ, ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಕೋವಿಡ್- 19 ನ ನೆಪವೊಡ್ಡಿ ಅದಕ್ಕೆ ನಾಮ ನಿರ್ದೇಶನ ಮಾಡಲು ಹೊರಟಿರುವ ನಿಯಮ ಅವೈಜ್ಞಾನಿಕವಾಗಿದ್ದು, ಇದು ಆಡಳಿತರೂಢ ಬಿಜಿಪಿ ಪಕ್ಷದ ಕಾರ್ಯಕರ್ತರನ್ನು ಗ್ರಾಮ ಪಂಚಾಯ್ತಿಗಳಿಗೆ ಅನುವು ಮಾಡುವ ಕೆಲಸದಂತೆ ಕಾಣುತ್ತದೆ. ಇಂತಹ ಕಾನೂನುಗಳನ್ನು ರೂಪಿಸವ ಬದಲು ಪ್ರಸ್ತುತ ಸದಸ್ಯರನ್ನು ಮುಂದುವರೆಸುವ ಅಥವಾ ವಿಶೇಷ ಆಧಿಕಾರಿಗಳನ್ನು ನೇಮಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಆರ್‍ಕೆಎಸ್ ಸ್ವಾಮಿ ಮಾತನಾಡಿ, ಎಪಿಎಂಸಿಯ ತಿದ್ದುಪಡಿಯ ಕಾಯ್ದೆಯು ರೈತರ ಮೇಲೆ ಮಾಡುತ್ತಿರುವ ಮತ್ತೊಂದು ರೀತಿಯ ಹಲ್ಲೆಯಾಗಿದೆ. ಇಲ್ಲಿ ಬಹು ರಾಷ್ಟ್ರೀಯ ಕಂಪೆನಿಗಳು, ಬಂಡವಾಳಶಾಹಿಗಳಿಗೆ ಅನೂಕೂಲವಾಗುತ್ತದೆಯೇ ವಿನಃ ರೈತರಿಗೆ ಯಾವುದೇ ನಯಾಪೈಸೆ ಲಾಭವಾಗುವುದಿಲ್ಲ ಎಂದರು.

ಪ್ರತಿಕಾಗೋಷ್ಠಿಯಲ್ಲಿ ರೈತ ಮುಖಂಡ ಬಸ್ತಿಹಳ್ಳಿ ರಾಜಣ್ಣ, ಮನೋಹರ್ ಪಟೇಲ್, ಬೆಲೆ ಕಾವಲು ಸಮಿತಿ ಶ್ರೀಕಾಂತ್, ಉಜ್ಜಜ್ಜಿ ರಾಜಣ್ಣ, ಶ್ರೀಧರ್, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Share

Leave a Comment