ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ನಿರ್ಧಾರ

ಮೈಸೂರು, ಮೇ.23:- ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತಸಂಘ ಪ್ರತಿಭಟನೆಗೆ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಕುರಿತು ಮಾಹಿತಿ ನೀಡಿದರು.
ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಕಾದ ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ರೈತ ಸಂಘದಿಂದ ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದರು.
ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಕೇಂದ್ರ ಸರ್ಕಾರದ ಒತ್ತಾಯಕ್ಕೆ ಮಣಿದ ಸಿಎಂ ಯಡಿಯೂರಪ್ಪ ಈ ನಿರ್ಧಾರ ಮಾಡಿದ್ದಾರೆ. ಸ್ವತಃ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಮಾದುಸ್ವಾಮಿ ಅವರಿಗೂ ಈ ಕಾಯ್ದೆ ತಿದ್ದುಪಡಿ ಮಾಡುವುದಕ್ಕೆ ಒಪ್ಪಿಗೆ ಇರಲಿಲ್ಲ. ಈ ಬಗ್ಗೆ ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಅನಿವಾರ್ಯವಾಗಿ ಕೇಂದ್ರದ ಒತ್ತಡಕ್ಕೆ ಮಣಿದು ಈ ನಿರ್ಧಾರ ಮಾಡಿದ್ದಾರೆ. ಕೆಲವು ರಾಜ್ಯ ಸರ್ಕಾರಗಳೇ ಈ ಕಾಯ್ದೆ ತಿದ್ದುಪಡಿ ಮಾಡಲ್ಲವೆಂದು ಹೇಳಿವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕಾಯ್ದೆ ತಿದ್ದುಪಡಿ ಮಾಡಲಾಗ್ತಿದೆ. ಎಪಿಎಂಸಿಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಕಾಯ್ದೆ ಕೇವಲ ರೈತರಿಗಷ್ಟೆ ಅಪಾಯ ಅಲ್ಲ. ಲಕ್ಷಾಂತರ ಕಾರ್ಮಿಕರು, ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೂ ತೊಂದರೆ ಆಗಲಿದೆ. ಸರ್ಕಾರದ ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಬೀಜ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ಇನ್ನು ಮುಂದೆ ಪ್ರತಿಭಟನೆ ಪರ್ವ ಆರಂಭವಾಗಲಿದೆ. ಜೂನ್ 10 ರ ನಂತರ ಖಾಸಗೀಕರಣ ವಿರೋಧಿಸಿ ಬೃಹತ್ ಚಳುವಳಿ ರೂಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಸದಸ್ಯರು, ರೈತ ಮುಖಂಡರು ಉಪಸ್ಥಿತರಿದ್ದರು.

Leave a Comment