ಎನ್.ಇ.ಕೆ.ಎಸ್.ಆರ್.ಟಿ.ಸಿ ಬಳ್ಳಾರಿ ಡಿಸಿ ವಿರುದ್ಧ ಪ್ರತಿಭಟನೆ ಕಾರ್ಮಿಕರ ಸಮಸ್ಯೆ ಕೇಳಲ್ಲ ಕಿರುಕುಳ ಮಾತ್ರ ತಪ್ಪಿಲ್ಲ

ಬಳ್ಳಾರಿ, ಜ.18: ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರು ಕಾರ್ಮಿಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಆದರೆ ಅವರಿಂದ ಕಾರ್ಮಿಕರಿಗೆ ಕಿರುಕುಳ ತಪ್ಪಿಲ್ಲ ಎಂದು ಅವರ ವಿರುದ್ಧ ಇಂದು ನಗರದಲ್ಲಿನ ಸಂಸ್ಥೆಯ ವಿಭಾಗೀಯ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘ ಈ ಪ್ರತಿಭಟನೆ ಹಮ್ಮಿಕೊಂಡಿತ್ತು.

ವಿನಾಕಾರಣ ಮೂರು ಜನ ಕಾರ್ಮಿಕರನ್ನು ವಜಾ ಮಾಡಿರುವುದನ್ನು ಖಂಡಿಸಿ ಮತ್ತು ಹಲವಾರು ತಿಂಗಳಿಂದ ಬಗೆಹರಿಯದೇ ಉಳಿದಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಒಂದು ದಿನ ಪ್ರತಿಭಟನೆ ನಡೆಸಲಾಯಿತು.

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್ ನ ಅಧ್ಯಕ್ಷ ಹೆಚ್.ವಿ.ಅನಂತ ಸುಬ್ಬರಾವ್ ಇವರು ನೇತೃತ್ವ ವಹಿಸಿ ಕಾರ್ಮಿಕರಿಗೆ ಸದಾ ಕಿರುಕುಳ ನೀಡುತ್ತಿರುವ ಧೋರಣೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಲ್ಲದು. ಹಿರಿಯ ಅಧಿಕಾರಿಗಳ ಸೂಚನೆಗೆ ಸಹಕಾರ ಕೊಡದೇ, ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಸಮಾಲೋಚನೆಗೆ ಮುಂದಾಗದೆ ಉದ್ಘಾಟತನ ತೋರುತ್ತಿರುವುದನ್ನು ಬಿಡಬೇಕು, ಮೈಲೇಜ್ ಬರುತ್ತಿಲ್ಲ, ಆದಾಯ ಕಡಿಮೆ ಎಂಬ ಸಬೂಬುಗಳನ್ನು ಹೇಳಿದರೆ ಸಾಲದು. ಕಾರ್ಮಿಕರಿಗೆ ಡಿಪೋಗಳಲ್ಲಿ ಕನಿಷ್ಠ ಕುಡಿಯುವ ನೀರು, ಶೌಚಾಲಯಗಳ ಸೌಲಭ್ಯ ಇಲ್ಲ, ರಜೆಯಲ್ಲಿ ತಾರತಮ್ಯ ಮಾಡುತ್ತ ಬಾಲ ಬಡುಕರನ್ನಷ್ಟೆ ಬೆಂಬಲಿಸುತ್ತಿರುವುದು ಸರಿಯಲ್ಲ ಎಂದು ಸುಬ್ಬರಾವ್ ಅವರು ಎಚ್ಚರಿಕೆ ನೀಡಿದರು.

ವಿನಾಕಾರಣ ವಜಾ ಮಾಡಿರುವ ಮಲ್ಲಿಕಾರ್ಜುನ, ಬಿ.ಶಿವಮೂರ್ತಿ, ಮುತ್ತಪ್ಪ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು, ಕೋರಿಕೆ ಮೇರೆಗೆ ಘಟಕವಾರು ವರ್ಗಾವಣೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಕೆ.ನಾಗಭೂಷಣ ರಾವ್, ಆದಿಮೂರ್ತಿ, ಟಿ.ಚೆನ್ನಪ್ಪ, ಜಿ.ಶಿವಕುಮಾರ್, ಮೊದಲಾದವರು ಇದ್ದರು.

Leave a Comment