ಎನ್‌ಸಿಪಿ, ಟಿಎಂಸಿ, ಸಿಪಿಐಗೆ ರಾಷ್ಟ್ರೀಯ ಸ್ಥಾನಮಾನ ರದ್ದು ಸಂಭವ

ನವದೆಹಲಿ, ಆ. ೧೪- ಚುನಾವಣಾ ಚಿಹ್ನೆ (ಮೀಸಲಾತಿ ಮತ್ತು ಹಂಚಿಕೆ ಆದೇಶ) ೧೯೬೮ರ ಅನ್ವಯ ನಿಗದಿತ ಪ್ರಮಾಣದ ಮತ ಪಡೆದುಕೊಳ್ಳುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ನ್ಯಾಷನಲ್ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷ ಪಕ್ಷಗಳಿಗೆ ನೀಡಿದ್ದ ರಾಷ್ಟ್ರೀಯ ಸ್ಥಾನಮಾನ ಹಿಂಪಡೆಯಬಹುದಾಗಿದೆ.
ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಈ ಮೂರೂ ಪಕ್ಷಗಳ ರಾಷ್ಟ್ರೀಯ ಸ್ಥಾನಮಾನ ಕುರಿತು ಸದ್ಯದಲ್ಲೇ ತನ್ನ ನಿರ್ಧಾರ ಪ್ರಕಟಿಸಲಿದೆ. ಕೆಲದಿನಗಳ ಹಿಂದೆ ಕೇಂದ್ರ ಚುನಾವಣಾ ಆಯೋಗ ಈ ಮೂರೂ ಪಕ್ಷಗಳಿಗೆ ನೋಟಿಸ್ ಜಾರಿಮಾಡಿ, ಪಕ್ಷದ ಸಾಧನೆಯ ಆಧಾರದ ಮೇಲೆ ತಮ್ಮ ಪಕ್ಷದ ರಾಷ್ಟ್ರೀಯ ಸ್ಥಾನಮಾನವನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿತ್ತು.
ಚುನಾವಣಾ ಚಿಹ್ನೆ (ಮೀಸಲಾತಿ ಮತ್ತು ಹಂಚಿಕೆ ಆದೇಶ) ೧೯೬೮ರ ಅನ್ವಯ ರಾಜಕೀಯ ಪಕ್ಷಗಳು, ರಾಷ್ಟ್ರೀಯ ಸ್ಥಾನಮಾನ ಪಡೆಯಬಹುದಾಗಿದೆ. ಆದರೆ ಆ ಪಕ್ಷಗಳ ಅಭ್ಯರ್ಥಿಗಳು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ ನಾಲ್ಕು ಅಥವಾ ಹೆಚ್ಚು ರಾಜ್ಯಗಳಲ್ಲಿ ಕನಿಷ್ಟ ಶೇ. ೬ ಮತಗಳನ್ನು ಪಡೆದರೆ ಮಾತ್ರ, ರಾಷ್ಟ್ರೀಯ ಸ್ಥಾನಮಾನವನ್ನು ಉಳಿಸಿಕೊಳ್ಳಬಹುದಾಗಿದೆ.
ಒಂದು ರಾಜಕೀಯ ಪಕ್ಷದ ರಾಷ್ಟ್ರೀಯ ಸ್ಥಾನಮಾನ ಪಡೆಯಲು ಲೋಕಸಭೆಯಲ್ಲಿ ಕನಿಷ್ಟ ನಾಲ್ಕು ಸಂಸದರ ಸ್ಥಾನ, ಒಟ್ಟು ಲೋಕಸಭಾ ಸ್ಥಾನಗಳಲ್ಲಿ ಕನಿಷ್ಟ ಎರಡು ಪ್ರತಿಷ್ಠಿತ ಸ್ಥಾನಗಳನ್ನು ಕಾಯ್ದುಕೊಂಡಿರಬೇಕು ಹಾಗೂ ಕನಿಷ್ಟ ಮೂರು ರಾಜ್ಯದಿಂದ ಈ ಅಭ್ಯರ್ಥಿಗಳು ಆಯ್ಕೆಯಾಗಬೇಕು ಎನ್ನುವ ನಿಯಮವಿದೆ.
ಆದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಸಿಪಿಐ, ಸಿಪಿಐ(ಎಂ), ಎನ್‌ಸಿಪಿ ಮೇಘಾಲಯದ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ, ರಾಷ್ಟ್ರೀಯ ಸ್ಥಾನಮಾನಗಳನ್ನು ಹೊಂದಿದ್ದವು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ, ಟಿಎಂಸಿ, ಸಿಪಿಐ ಸಾಧನೆ ಕಳಪೆಯಾಗಿರುವುದರಿಂದ ರಾಷ್ಟ್ರೀಯ ಸ್ಥಾನಮಾನ ಮಾನದಂಡ ಪೂರ್ಣಗೊಳಿಸಲು ವಿಫಲವಾಗಿರುವುದರಿಂದ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ಈ ಮೂರೂ ಪಕ್ಷಗಳು ಬಹುತೇಕ ಕಳೆದುಕೊಳ್ಳುವ ಸಾಧ್ಯತೆ ಇದೆ.

Leave a Comment