ಎನ್‌ಪಿಎಸ್ ರದ್ದಿಗೆ ನೌಕರರ ಒತ್ತಾಯ

ರಾಯಚೂರು.ಮಾ.14- ಸರ್ಕಾರಿ ನೌಕರರಿಗೆ ಮಾರಕವಾಗಿರುವ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದು ಪಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಮನವಿ ಸಲ್ಲಿಸಿ, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರವೃಂದಕ್ಕೆ ನೂತನ ಪಿಂಚಣಿ ಯೋಜನೆ ಮಾರಕವಾಗಿ ಪರಿಣಮಿಸಿದೆ. ಮೇಲ್ಕಂಡ ಯೋಜನೆ ಸರ್ಕಾರಿ ನೌಕರರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಅಂತಃಕಲಹಕ್ಕೆ ಕಾರಣವಾಗಿದೆ. ಶೇರು ಮಾರುಕಟ್ಟೆ ಆಧಾರಿತ ಯೋಜನೆಯಿಂದ ನಿವೃತ್ತ ನೌಕರರು ಕನಿಷ್ಟ ಪಿಂಚಣಿಯಿಂದ ವಂಚಿತಗೊಳ್ಳುವಂತಾಗಿದೆ.
ಶೇ.10 ರಷ್ಟು ವೇತನ ಕಟಾವಿನ ಯೋಜನೆ ನೌಕರರ ಮಧ್ಯೆ ತಾರತಮ್ಯ ಭೀತಿಯಿಂದ ಕೂಡಿದೆ. ಪಿಂಚಣಿ ನಿಧಿ ಹಾಗೂ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯನ್ವಯ ನೌಕರರ ಹಣ ಭದ್ರಗೊಳಿಸುವ ಯಾವುದೇ ಭರವಸೆ ಹೊಂದಿಲ್ಲ. ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ ಉಳಿತಾಯ ಮಾಡ‌ಲು ಅವಕಾಶ ಕಲ್ಪಿಸದ ನೂತನ ಪಿಂಚಣಿ ಯೋಜನೆ ಈ ಕೂಡಲೇ ರದ್ದು ಪಡಿಸಿ ಈ ಹಿಂದಿನ ಹಳೆ ಪಿಂಚಣಿ ಯೋಜನೆಯನ್ನೇ ಯಥಾವತ್ ಅನುಷ್ಠಾನಗೊಳಿಸುವಂತೆ ಆಗ್ರಹಿಸಲಾಯಿತು.
ಇದೇ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಎನ್‌ಪಿಎಸ್ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಬಿರಾದರ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ, ತಾಲೂಕಾಧ್ಯಕ್ಷರಾದ ಚನ್ನವೀರ, ಜಿಲ್ಲಾ ಕಾರ್ಯದರ್ಶಿ ರಾಮಸ್ವಾಮಿ, ಹಾಲಪ್ಪ ನಾಯಕ, ಅಮರೇಶ ರಾಥೋಡ್, ಸಂತೋಷಕುಮಾರ, ರಮೇಶ, ಬಸವರಾಜ ಕರಡಕಲ್, ವೆಂಕಟೇಶ, ಪರಶುರಾಮ ಇನ್ನಿತರರು ಉಪಸ್ಥಿತರಿದ್ದರು.

Leave a Comment