ಎನ್‌ಡಿಎ ಒಗ್ಗಟ್ಟಿಗೆ ಉಪಸಭಾಪತಿ ಚುನಾವಣೆ ಸಾಕ್ಷಿ

ನವದೆಹಲಿ, ಆ. ೧೧- ಎನ್.ಡಿ.ಎ ಮೈತ್ರಿ ಕೂಟದಲ್ಲಿ ಯಾವುದೇ ಬಿರುಕಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ರಾಜ್ಯಸಭೆ ಉಪಸಭಾಪತಿ ಚುನಾವಣೆ ನಿರೂಪಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಉಪಸಭಾಪತಿ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಪ್ರತಿಪಕ್ಷಗಳಿಗೆ ಮುಖಭಂಗವಾಗಿದೆ. ಇದೇ ಒಗ್ಗಟ್ಟನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಯ್ದುಕೊಂಡು ಹೋಗುತ್ತೇವೆ. ಇದರಿಂದಾಗಿ ವಿರೋಧ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿಂದು ಸಚಿವ ವಿಜಯ್ ಗೋಯಲ್ ಸೇರಿದಂತೆ, ಹಲವು ಸಚಿವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಅಧಿವೇಶನ ಯಶಸ್ವಿಯಾಗಿದೆ. 14 ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ. ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಿ ಜನರ ಸಮಸ್ಯೆಗಳನ್ನು ಆಲಿಸಲು ಅವಕಾಶ ಮಾಡಲಾಗಿದೆ ಎಂದರು.

ಈ ಬಾರಿ ದಾಖಲೆ ಎನ್ನುವಂತೆ 11 ಗಂಟೆ 40 ನಿಮಿಷಗಳ ಕಾಲ ದಾಖಲೆಯ ಚರ್ಚೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸತ್‌ನಲ್ಲಿ ಕಲಾಪದಲ್ಲಿ ದಾಖಲೆಯ ವಿಷಯ ಎಂದು ಹೇಳಿದರು.

ತ್ರಿವಳಿ ತಲಾಕ್ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಹಾಗೂ ಆ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಪದೇಪದೇ ಅಡಚಣೆ ಮಾಡಿದರು. ಇದರಿಂದ ಜನರನ್ನು ದಾರಿ ತಪ್ಪಿಸುವ ಕೆಲಸವನ್ನೂ ಮಾಡಿದರು ಎಂದು ದೂರಿದರು. ನಾವು ವಿರೋಧ ಪಕ್ಷಗಳ ಮನೆಗೆ ತೆರಳಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದರೂ ತ್ರಿವಳಿ ತಲಾಕ್ ಮಸೂದೆ ಅಂಗೀಕಾರವಾಗದಿರುವುದು ದುಃಖಕರ ಸಂಗತಿ ಎಂದರು.

ತ್ರಿವಳಿ ತಲಾಕ್ ಮಸೂದೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದರೂ, ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಅಸ್ಸಾಂನ ರಾಷ್ಟ್ರೀಯ ನಾಗರೀಕ ಪೌರತ್ವ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ, ವಿರೋಧ ಪಕ್ಷಗಳು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.  ಮೋಟಾರ್ ವಾಹನ ಕಾಯ್ದೆ ಇನ್ನೂ ಅಂಗೀಕಾರವಾಗಿಲ್ಲ. ಈ ಬಗ್ಗೆ ಜನರಲ್ಲಿ ಯಾವುದೇ ಆತಂಕ ಬೇಡ ಎಂದು ಅವರು ಮನವಿ ಮಾಡಿದರು.

ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 21 ಮಹತ್ವ ಪೂರ್ಣ ಮಸೂದೆಗಳಿಗೆ ಅಂಗೀಕಾರ ನೀಡುವ ಮೂಲಕ ಈ ಬಾರಿಯ ಮುಂಗಾರು ಅಧಿವೇಶನ ಫಲಪ್ರದವಾಗಿದೆ ಎಂದು ಹೇಳಿದರು.

Leave a Comment