ಎನ್ಆರ್‌ಬಿಸಿ 5 ಎ ಕಾಲುವೆಗೆ ನೀರು ಹರಿಕೆಗೆ ಆಗ್ರಹಿಸಿ

ದಿ.23 ರಂದು ರೈತರ ಬೃಹತ್ ಸಮಾವೇಶ
ರಾಯಚೂರು.ಮಾ.20- ನಾರಾಯಣಪುರ ಬಲದಂಡೆ 5 ಎ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ, ಎನ್‌ಆರ್‌ಬಿಸಿ 5 ಎ ಹೋರಾಟ ಸಮಿತಿ ವತಿಯಿಂದ ದಿ.23 ರಂದು ಮಸ್ಕಿ ತಾಲೂಕಿನ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ರೈತರ ಬೃಹತ್ ಸಮಾವೇಶ ನಡೆಸಿ, ಕಾಲುವೆಗೆ ನೀರು ಹರಿಸುವಂತೆ ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಮಾನ್ವಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಗೌಡ್ರು ತಿಳಿಸಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಾರಾಯಣಪುರ ಬಲದಂಡೆ 5 ಎ ಕಾಲುವೆ ವ್ಯಾಪ್ತಿಯಲ್ಲಿ ಬರುವ ಲಿಂಗಸೂಗೂರು, ಸಿಂಧನೂರು, ಮಾನ್ವಿ ಮತ್ತು ಮಸ್ಕಿ ತಾಲೂಕುಗಳಲ್ಲಿ ರೈತರು ನೀರಿನ ಅಭಾವ ಎದುರಿಸುತ್ತಿರುವುದರಿಂದ ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಎನ್‌ಆರ್‌ಬಿಸಿ 5 ಎ ಕಾಲುವೆಗೆ ನೀರು ಹರಿಸುವಲ್ಲಿ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಈ ಭಾಗದ ರೈತರನ್ನು ಕೆರಳಿಸುವಂತೆ ಮಾಡಿದೆ. ಕಳೆದ 2 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಮ್ಮ ನಿವಾಸದಲ್ಲಿ ಜಿಲ್ಲೆಯ ರೈತರ ನಿಯೋಗ ಭೇಟಿಯಾದ ವೇಳೆ ತಜ್ಞರೊಂದಿಗೆ ಚರ್ಚಿಸಿ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಆದರೆ, ಇದುವರೆಗೂ ಒಂದು ಹನಿ ನೀರು ಸಹ 5 ಎ ಕಾಲುವೆಗೆ ಹರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. 2015 ಜುಲೈ 23 ರಂದು ನೀರಾವರಿ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿಯಾದ ವೇಳೆ ನೀರು ಹರಿಸುವ ಕುರಿತು ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ನೀರು ಹರಿಸುವುದಾಗಿ ಹಾರಿಕೆ ಉತ್ತರ ನೀಡಿ ಸರಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಖಂಡನೀಯ.

ಬೆಳಗಾವಿ ಅಧಿವೇಶನದಲ್ಲಿ ಎನ್ಆರ್‌ಬಿಸಿ 5 ಎ ಕಾಲುವೆಗೆ ನೀರು ಹರರಿಸುವಂತೆ ಶಾಸಕರುಗಳಾದ ಪ್ರತಾಪಗೌಡ ಪಾಟೀಲ್, ತಿಪ್ಪರಾಜು ಹವಾಲ್ದಾರ ಅವರು ಪ್ರಶ್ನೆ ಕೇಳಿದಾಗ ಸಚಿವರು ಸಮರ್ಪಕ ಉತ್ತರ ನೀಡದೇ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ನೀರಿನ ಲಭ್ಯತೆಯನ್ನು ಅರಿತುಕೊಂಡು ನೀರು ಹರಿಸುವುದಾಗಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘ ಅಧ್ಯಕ್ಷ ಡಿ. ವೀರನಗೌಡ ಮಾತನಾಡಿ, ಎನ್‌ಆರ್‌ಬಿ.ಸಿ. 5 ಎ ಕಾಲುವೆಗೆ ನೀರು ಹರಿಸುವಲ್ಲಿ ಸರಕಾರ ಸುಳ್ಳು ಭರವಸೆ ನೀಡುವಲ್ಲಿ ನಿರತರಾಗಿ, ಈ ಭಾಗದ ರೈತರನ್ನು ಕೃಷಿ ವಲಯದಿಂದ ಕೈ ಬಿಡುವ ಹುನ್ನಾರ ನಡೆಸಿದ್ದಾರೆ. 1972 ರಲ್ಲಿ ಕೇಂದ್ರ ನೀರಾವರಿ ಸಲಹಾಸಮಿತಿ ವರದಿಯನ್ವಯ ಕಾಲುವೆಗೆ ನೀರು ಹರಿಸುವ ಕುರಿತು ತಜ್ಞರ ತಂಡ ರಚಿಸಲಾಗಿತ್ತು. ಆದರೆ, ಸರಕಾರ ಆ ವರದಿಯನ್ನು ಪರಿಶೀಲಿಸದೇ, ಮೂಲೆಗುಂಪು ಮಾಡಿದ್ದಾರೆ.
ಜಿಲ್ಲೆಯಲ್ಲಿ 2 ನದಿಗಳು ಹಾದು ಹೋದರೂ, ನೀರಿನ ಸಮಸ್ಯೆ ಎದುರಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಎನ್‌ಆರ್‌ಬಿಸಿ 5 ಎ ಕಾಲುವೆಯು ಕಾಲಾಪುರ ಹತ್ತಿರ 17.30 ಕಿ.ಮೀ.ನ ಬಲಬದಿಗೆ ನಿರ್ಮಿಸುವ ಮೂಲಕ ಲಿಂಗಸೂಗೂರು ತಾಲೂಕಿನ 20 ಹಳ್ಳಿ, ಸಿಂಧನೂರು ತಾಲೂಕಿನ 10 ಹಳ್ಳಿ, ಮಾನ್ವಿ ತಾಲೂಕಿನ 20, ದೇವದುರ್ಗ ತಾಲೂಕಿನ 2 ಹಾಗೂ ರಾಯಚೂರು ತಾಲೂಕಿನ 58 ಹಳ್ಳಿಗಳು ನೀರಾವರಿ ಸೌಲಭ್ಯ ಪಡೆಯಬಹುದಾಗಿದೆ. ಸರಕಾರ ಎನ್ಆ‌ರ್‌ಬಿಸಿ 5 ಎ ಕಾಲುವೆಗೆ ನೀರು ಹರಿಸುವವರೆಗೂ ಹೋರಾಟ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರ ಸ್ವಾತಂತ್ರ ನಂತರ ಸರ್ವೆ ನಡೆಸಿ, ಈ ಭಾಗವು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಈ ನಿಟ್ಟಿನಲ್ಲಿ 7,8,9 ಎ ಮಾದರಿಯಲ್ಲಿ 5 ಎ ಅನುಷ್ಠಾನಕ್ಕೆ ಡಿ.ಪಿ.ಆರ್.ಗೆ ಆದೇಶಿಸಬೇಕು ಮತ್ತು ತಾಂತ್ರಿಕ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು. ದಿ.23 ರಂದು ನಡೆಯಲಿರುವ ಸಮಾವೇಶಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತು ನೀರಾವರಿ ಇಲಾಖೆಯ ಅಭಿಯಂತರರು ಆಗಮಿಸುವರೆಂದು ತಿಳಿಸಿದರು.
ಅಪ್ಪಾಜಿಗೌಡ್ರು, ಬಸವನಗೌಡ, ಹನುಮಂತ್ರಾಯ, ಕೆ.ಜಿ.ವೀರೇಶ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment