ಎದೆ ನೋವು; ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಆಸ್ಪತ್ರೆಗೆ ದಾಖಲು

ಮುಂಬೈ: ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಇಂದು ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಕುರಿತಾದ ಕಸರತ್ತು ಆರಂಭಗೊಂಡಂದಿನಿಂದ ರಾವತ್ ಪ್ರತಿ ದಿನ ಮಾಧ್ಯಮದ ಜತೆ ಮಾತನಾಡಿ ಶಿವಸೇನೆಯ ನಿಲುವಿನ ಬಗ್ಗೆ ಮಾಹಿತಿ ನೀಡುತ್ತಿದ್ದರು.

ರಾವತ್ ಇಂದು ಅಪರಾಹ್ನ ಸುಮಾರು 3.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಡಾ. ಜಲೀಲ್ ಪಾರ್ಕರ್ ಚಿಕಿತ್ಸೆ ನೀಡುತ್ತಿದ್ದಾರೆ. ಆಂಜಿಯೋಗ್ರಾಫಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಇಂದು ಸಂಜೆ ವೈದ್ಯರು ನಿರ್ಧರಿಸಲಿದ್ದಾರೆಂಬ ಮಾಹಿತಿಯಿದೆ. ಅವರನ್ನು ನಾಳೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎಂದು ಅವರ ಸೋದರ ಹಾಗೂ ಶಿವಸೇನೆಯ ಶಾಸಕರಾಗಿರುವ ಸುನಿಲ್ ರಾವತ್ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಆಸ್ಪತ್ರೆಗೆ ನಿಯಮಿತ ತಪಾಸಣೆಗೆ ರಾವತ್ ಆಗಮಿಸಿದ್ದಾಗ ಇಸಿಜಿ ವರದಿ ಆಧಾರದಲ್ಲಿ ಅವರಿಗೆ ಇಂದು ಬರಲು ವೈದ್ಯರು ಹೇಳಿದ್ದಾರೆಂದೂ ಕೆಲ ಮೂಲಗಳು ತಿಳಿಸಿವೆ. ರಾವತ್ ಅವರು ಶಿವಸೇನೆಯ ಮುಖವಾಣಿ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.

Leave a Comment