ಎತ್ತುಗಳ ಭಾರದ ಕಲ್ಲೆಳೆಯುವ ಸ್ಪರ್ಧೆಗೆ ಅದ್ಧೂರಿ ತೆರೆ

ಕೃಷಿಯೊಂದಿಗೆ ಉಪ ಕಸುಬು ಹೊಂದಲು ರೈತರಿಗೆ ಸಲಹೆ
* ಮುಂಗಾರು ಹಬ್ಬಕ್ಕೆ ಸರ್ಕಾರದ ನೆರವಿಗೆ ಪ್ರಾಮಾಣಿಕ ಯತ್ನ
ರಾಯಚೂರು.ಜೂ.18- ಕೃಷಿಯೊಂದಿಗೆ ಪಶು ಸಂಗೋಪನೆ ಪರ್ಯಾಯ ಉಪ ಕಸುಬು ಹೊಂದಿದ ಕುಟುಂಬಗಳ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳು ಅತ್ಯಂತ ಕಡಿಮೆ. ಆದರೆ, ಕೇವಲ ಕೃಷಿಯನ್ನೆ ನಂಬಿಕೊಂಡ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಅಖಿಲ ಭಾರತ ಸಮೀಕ್ಷೆಯಲ್ಲಿ ನಡೆದ ಬಹಿರಂಗಗೊಂಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅವರು ಹೇಳಿದರು.
ಅವರಿಂದು ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರುಕಾಪು ಸಮಾಜ ಆಯೋಜಿಸಿದ್ದ ಕೊನೆ ದಿನದ ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದರು. ಕೃಷಿಯೊಂದಿಗೆ ಹೈನುಗಾರಿಕೆ ಸೇರಿದಂತೆ ಇತರೆ ಉಪ ಕಸುಬುಗಳನ್ನು ಕೃಷಿಕ ಕುಟುಂಬ ಅವಲಂಬಿಸಬೇಕು. ಇದರಿಂದ ಕೃಷಿಯ ನಷ್ಟ ಭರಿಸಲು ಸಾಧ್ಯವಾಗುತ್ತದೆ. ಇಲ್ಲವಾದರೇ, ಆರ್ಥಿಕ ತೊಂದರೆಯಿಂದ ರೈತರು ಆತ್ಮಹತ್ಯೆಯಂತಹ ದುರದೃಷ್ಟ ಘಟನೆಗಳಿಗೆ ಗುರಿಯಾಗಬೇಕಾಗುತ್ತದೆ.
ಈ ದೇಶ ಹಳ್ಳಿಗಳ ನಾಡಾಗಿದೆ. ಇದು ಕೃಷಿ ಪ್ರಧಾನ ದೇಶವಾಗಿದೆ. ಗ್ರಾಮೀಣ ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆ ಮರೆಯುವಂತಹ ಸ್ಥಿತಿಯಲ್ಲಿ ಮುನ್ನೂರುಕಾಪು ಸಮಾಜ ಈ ಸಂಸ್ಕೃತಿ ಮತ್ತು ಹಬ್ಬಗಳಿಗೆ ಜೀವ ತುಂಬುವ ಕೆಲಸ ಅತ್ಯಂತ ಶ್ಲಾಘನೀಯವಾಗಿದೆ. ಕಳೆದ 19 ವರ್ಷಗಳಿಂದ ಒಂದು ಸಮುದಾಯದ ಈ ರೀತಿಯ ಮೂರು ದಿನಗಳ ವೈಭವಕ್ಕೆ ವೇದಿಕೆಯಾಗಿರುವುದು ಪ್ರಶಂಸನೀಯ.
ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಉತ್ಸವ ನಡೆಸಲಾಗುತ್ತದೆ. ಆದರೆ, ರಾಯಚೂರಿನಲ್ಲಿ ಯಾವುದೇ ಜಿಲ್ಲಾ ಉತ್ಸವಗಳಿಲ್ಲ. ಆದರೆ, ಮುನ್ನೂರುಕಾಪು ಸಮಾಜ ಮುಂಗಾರು ಹಂಗಾಮಿನ ಮೊದಲ ಹಬ್ಬವಾದ ಕಾರ ಹುಣ್ಣಿಮೆಯನ್ನು ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಹಬ್ಬ ಆಚರಣೆಗೆ ಸರ್ಕಾರದ ನೆರವಿನ ಬಗ್ಗೆ ಮಾಜಿ ಶಾಸಕ ಎ.ಪಾಪಾರೆಡ್ಡಿ ಅವರು ಪ್ರಸ್ತಾಪಿಸಿದ್ದಾರೆ.
ಜೂ.26 ರಂದು ಮಾನ್ವಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಾಸ್ತವ್ಯಕ್ಕೆ ಆಗಮಿಸಲಿದ್ದಾರೆ. ಎ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ನಿಯೋಗವೊಂದು ಬಂದರೇ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಅವರಿಂದ ಈ ಹಬ್ಬಕ್ಕೆ ಸೂಕ್ತ ನೆರವು ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಂ.ಎಸ್.ಜಯರಾಮ ಅವರು ಮಾತನಾಡುತ್ತಾ, ಮುಂಗಾರು ಸಾಂಸ್ಕೃತಿಕ ಹಬ್ಬ ಈ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿ ಮಾರ್ಪಟ್ಟಿದೆ. ಕೃಷಿ ಮತ್ತು ಪಶು ಸಂಗೋಪನೆ ನಶಿಸುವ ಹಂತದಲ್ಲಿ ಈ ಹಬ್ಬದ ಆಯೋಜನೆ ಈ ಚಟುವಟಿಕೆಗಳಿಗೆ ಮತ್ತಷ್ಟು ಪ್ರೇರಣೆ ನೀಡುವಂತೆ ಮಾಡಿದೆ. ಎ.ಪಾಪಾರೆಡ್ಡಿ ಅವರ ಈ ಕೆಲಸ ನಿಜವಾಗಿಯೂ ಪ್ರಶಂಸನೀಯವಾಗಿದೆ.
ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ನಾರಾಯಣಪೇಟೆ ಕ್ಷೇತ್ರದ ಶಾಸಕರಾದ ಎಸ್.ಆರ್.ರೆಡ್ಡಿ ಅವರು ಮಾತನಾಡುತ್ತಾ, ಮುನ್ನೂರುಕಾಪು ಸಮಾಜ ಎ.ಪಾಪಾರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 19 ವರ್ಷಗಳಿಂದ ಇಂತಹದೊಂದು ಕಾರ್ಯಕ್ರಮ ನಡೆಸುತ್ತಿರುವುದು ವಿವಿಧ ಸಮುದಾಯಗಳಿಗೆ ಮಾದರಿಯಾಗಿ ನಿಂತಿದೆ. ಕೃಷಿ ಅತ್ಯಂತ ಮಹತ್ವದ್ದಾಗಿದೆ. ದೇಶಕ್ಕೆ ಅನ್ನ ನೀಡುವ ಕೃಷಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯೆಗೆ ಗುರಿಯಾಗಬಾರದು.
ಮಹಾನಗರಗಳಲ್ಲಿ ಐಟಿ ಉದ್ಯಮಿಗಳು ಒಂದೆರಡು ದಿನ ಕೃಷಿಯಲ್ಲಿ ತೊ‌ಡಗಿಕೊಳ್ಳುವಂತಹ ದಿನಗಳು ಬಂದಿವೆ. ಆದರೆ, ಮುನ್ನೂರುಕಾಪು ಸಮಾಜ ಇಂದಿಗೂ ಕೃಷಿ ವ್ಯವಸ್ಥೆ ಮುಂದುವರೆಸಿಕೊಂಡು ಬಂದಿರುವುದಷ್ಟೇ ಅಲ್ಲ, ಈ ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆಂದು ಶ್ಲಾಘೀಸಿದರು. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದಿಂದಲೂ ನೆರವು ನೀಡುವ ಅಗತ್ಯವಿದೆ. ಈ ದಿಕ್ಕಿನಲ್ಲಿ ಎಲ್ಲರೂ ಪೂರಕವಾಗಿ ಪ್ರಯತ್ನಿಸಬೇಕೆಂದ ಅವರು, ಈ ಕಾರ್ಯಕ್ರಮಕ್ಕೆ ನವೋದಯದಿಂದ ನೆರವು ನೀಡಲಾಗುತ್ತದೆಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ‌ರಾದ ಚಾಮರಸ ಮಾಲಿ ಪಾಟೀಲ್, ಈ.ಆಂಜಿನೇಯ್ಯ, ಕೃಷ್ಣಮೋಹನ ರೆಡ್ಡಿ, ಮಹಾಂತೇಶ ಪಾಟೀಲ್ ಅವರು ಮಾತನಾಡಿದರು. ವೇದಿಕೆ ಮೇಲೆ ಕೇಶವರೆಡ್ಡಿ, ಕುಂಟ್ನಾಳ ವೆಂಕಟೇಶ, ಗಿರೀಶ್ ಕನಕವೀಡು, ಶಿವಶಂಕರ್, ಲಕ್ಷ್ಮಣಗೌಡ ಸೇರಿದಂತೆ ಸಮಾಜದ ಮುಖಂಡರಾದ ಡ್ಯಾಡಿ ಗೋಪಾಲ ರೆಡ್ಡಿ, ದೊಡ್ಡ ಮಲ್ಲೇಶಪ್ಪ, ಕೃಷ್ಣಾ ರೆಡ್ಡಿ, ಭೀಮಾ ರೆಡ್ಡಿ, ಜಿ.ಶೇಖರ ರೆಡ್ಡಿ, ಗುಡ್ಸಿ ನರಸರೆಡ್ಡಿ, ಶ್ರೀನಿವಾಸ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment