ಎತ್ತಿನಬಂಡಿ ಚಾಲಕರ ಎತ್ತುಗಳಿಗೆ ಉಚಿತ ಮೇವು ಪೂರೈಕೆಗೆ ಆಗ್ರಹಿಸಿ ಬಿಎಂಎಸ್ ಪ್ರತಿಭಟನೆ

ಬಳ್ಳಾರಿ, ಆ.10: ನಗರದ ಎತ್ತಿನಬಂಡಿ ಚಾಲಕರ ಎತ್ತುಗಳಿಗೆ ಉಚಿತವಾಗಿ ಮೇವು ಪೂರೈಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಆಶ್ರಯದಲ್ಲಿ ನೂರಾರು ಜನ ಎತ್ತಿನಬಂಡಿ ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬಳ್ಳಾರಿ ನಗರದ ಎಪಿಎಂಸಿ ಮಾರ್ಕೆಟ್ ಯಾರ್ಡ್ ನಲ್ಲಿ ಅಂದಾಜು 300ಕ್ಕೂ ಹೆಚ್ಚು ಎತ್ತಿನಬಂಡಿ ಚಾಲಕರಿದ್ದು ಎತ್ತಿನಬಂಡಿ ಸೇವೆ ಸೌಕರ್ಯ ಒದಗಿಸುವ ಶ್ರಮಿಕ ಜೀವಿಗಳಾಗಿದ್ದಾರೆ. ಅವರ ಕುಟುಂಬಗಳಿಗೆ ಎತ್ತುಗಳೇ ಜೀವನಾಧಾರವಾಗಿರುತ್ತವೆ. ಕಳೆದ ಎರಡು-ಮೂರು ವರ್ಷಗಳಿಂದಲೂ ಸರಿಯಾಗಿ ಮಳೆಯಾಗದೇ ಬರಗಾಲದ ಕರಿಛಾಯೆ ಆವರಿಸಿದ್ದು, ಮೇವಿನ ಕೊರತೆ ಏರ್ಪಟ್ಟಿದೆ ಎಂದು ಬಿಎಂಎಸ್ ತಿಳಿಸಿದೆ.

ಬರಗಾಲದ ಕಾರಣಗಳಿಂದಾಗಿ ಮಳೆ ಇಲ್ಲದೇ ಮೂಲತಃ ಎತ್ತಿನಬಂಡಿಯ ಚಾಲಕರು ಕೆಲಸದಿಂದ ವಂಚಿತರಾಗಿದ್ದಾರೆ. ಅವರ ಕುಟುಂಬ ಜೀವನ ನಿರ್ವಹಣೆಯೂ ದುಸ್ತರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಜೀವನಾಧಾರಿತವಾಗಿರುವ ಎತ್ತುಗಳನ್ನು ಸಾಕುವುದಕ್ಕೆ ಮೇವು ಇಲ್ಲದೇ ಸಂಕಷ್ಟಕರ ಪರಿಸ್ಥಿತಿಯಲ್ಲಿದ್ದಾರೆ.

ಆದುದರಿಂದ ಎತ್ತಿನಬಂಡಿ ಚಾಲಕರುಗಳಿಗೆ, ಅವರ ಅಮೂಲ್ಯ ಆಸ್ತಿಯಾದ ಎತ್ತುಗಳನ್ನು ಬದುಕಿಸಿಕೊಳ್ಳಲು, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತವು ಉಚಿತವಾಗಿ ಮೇವು ಪೂರೈಕೆ ಮಾಡುವಂತೆ ಕೋರಿದ್ದಾರೆ.

ನಗರದ ಎಪಿಎಂಸಿ ಮಾರ್ಕೆಟ್ ನಿಂದ ಎತ್ತಿನ ಬಂಡಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಎತ್ತಿನಬಂಡಿ ಚಾಲಕರು, ಪ್ರಮುಖ ರಸ್ತೆಗಳ ಮೂಲಕ ಹಾಗೂ ಡಿಸಿ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಎತ್ತುಗಳಿಗೆ ಉಚಿತವಾಗಿ ಮೇವು ಪೂರೈಕೆ ಮಾಡುವಂತೆ ಆಗ್ರಹಿಸಿದರು. ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿಜಯ್ ಕುಮಾರ್, ನೇತೃತ್ವದಲ್ಲಿ ಧುರೀಣರುಗಳಾದ ವೀರಭದ್ರಪ್ಪ, ಶಶಾಂಕನ್, ಪ್ರಶಾಂತ್ ಕುಮಾರ, ಪಂಪಾರೆಡ್ಡಿ ಹಾಗೂ ದುರುಗಣ್ಣ, ಪರಮೇಶಿ, ರಾಜಶೇಖರ್, ರಾಜೇಶ್, ಸುರೇಂದ್ರ ಮತ್ತು ಇತರರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Comment