ಎಡಪಕ್ಷಗಳಿಂದ ಕರಾಳ ದಿನಾಚರಣೆ

ದಾವಣಗೆರೆ, ಡಿ. 6 – ಸಂಘಪರಿವಾರದ ಫ್ಯಾಸಿಸ್ಟ್-ಸರ್ವಾಧಿಕಾರಿ-ಅಸಹಿಷ್ಣು ನೀತಿಗಳು ಪ್ರಜಾಸತ್ತಾತ್ಮಕತೆಗೆ ಮತ್ತು ಜಾತ್ಯಾತೀತತೆಗೆ ಅಪಾಯ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಭಾರತ ಕಮ್ಮೂನಿಸ್ಟ್ ಪಕ್ಷ, ಸಿಪಿಐಎಂ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು.
1992ರ ಡಿಸೆಂಬರ್ 6 ರಂದು ಕಾನೂನು ಮತ್ತು ಸಂವಿಧಾನ ಜಾರಿ ಮಾಡಬೇಕಾಗಿದ್ದ ಅಂದಿನ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಭಾರತದ ಗಣತಂತ್ರ-ಜಾತ್ಯಾತೀತ-ಪ್ರಜಾಸತ್ತೆಯ ಸಂವಿಧಾನಕ್ಕೆ ತೀವ್ರ ಪ್ರಹಾರ ನೀಡಿವೆ. ಬಾಬರಿ ಮಸೀದಿ ಧ್ವಂಸದ ಘಟನೆ ನಡೆದು 25 ವರ್ಷಗಳಾದರು ದೇಶದ ಕಾನೂನು ಮತ್ತು ಸಂವಿಧಾನವನ್ನು ಗಾಳಿಗೆ ತೂರಿದ ಧ್ವಂಸ ಕಾರ್ಯ ಸಂಘಟಿಸಿದವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರ ಆರ್ ಎಸ್ ಎಸ್ ನ ಪ್ರಾಯೋಜಿತ ಹಿಂದುತ್ವ ಖಾಸಗಿ ಪಡೆಗಳು ತಾವು ಹೇಳಿದ್ದೇ ಕಾನೂನು ಎಂಬುವಂತೆ ವರ್ತಿಸುತ್ತಿವೆ. ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ. ನೈತಿಕ ಪೊಲೀಸ್ ಗಿರಿ ಪಡೆಗಳು ತಮ್ಮದೇ ಕಾನೂನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಶಕ್ತಿಗಳನ್ನು ಸೋಲಿಸಿ ಸಂವಿಧಾನದ ಆಶಯಗಳನ್ನು ಮತ್ತು ದೇಶದ ಐಕ್ಯತೆಯನ್ನು ರಕ್ಷಿಸಲು ಮುಂದಾಗಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಈ ವೇಳೆ ಕೆ.ಎಲ್.ಭಟ್ ಆವರಗೆರೆ ವಾಸು, ಸರೋಜಾ,ರಾಜು, ಆವರಗೆರೆ ಚಂದ್ರು, ಜಯಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Leave a Comment