ಎಟಿಎಮ್ ಇಂಟರ್ ಚೇಂಜ್ ಶುಲ್ಕ ಪರಿಷ್ಕರಣೆಗೆ 6 ಸದಸ್ಯರ ಸಮಿತಿ ರಚಿಸಿದೆ ಆರ್ ಬಿಐ

ಮುಂಬೈ, ಜೂನ್ 12 -ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಎಟಿಎಮ್ ನಿಯೋಜಿಸುವ ಪ್ರಯತ್ನದ ಬೆನ್ನಲ್ಲೇ ಎಟಿಎಮ್ ಇಂಟರ್ ಚೇಂಜ್ ಶುಲ್ಕ ಪರಿಷ್ಕರಣೆಗಾಗಿ ಕೇಂದ್ರೀಯ ಬ್ಯಾಂಕ್ (ಆರ್ ಬಿಐ) 6 ಸದಸ್ಯರ ಸಮಿತಿ ರಚಿಸಿದೆ.
ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ಜಿ ಕಣ್ಣನ್ ಅವರು ಪರಿಷ್ಕರಣಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಪ್ ಅಸ್ಬೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ಗಿರಿ ಕುಮಾರ್ ನಾಯರ್, ಎಚ್ ಡಿಎಫ್ ಸಿ ಬ್ಯಾಂಕ್ ನ ಎಸ್. ಸಂಪತ್ ಕುಮಾರ್, ಎಟಿಎಮ್ ಉದ್ಯಮ ಒಕ್ಕೂಟದ ನಿರ್ದೇಶಕ ಕೆ ಶ್ರೀನಿವಾಸ್, ಟಾಟಾ ಕಮ್ಯುನಿಕೇಷನ್ಸ್ ಪೇಮೆಂಟ್ ಸೊಲ್ಯೂಷನ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಪಟೇಲ್ ಪರಿಷ್ಕರಣಾ ಸಮಿತಿಯ ಸದಸ್ಯರಾಗಿದ್ದಾರೆ.
ಬ್ಯಾಂಕಿಂಗ್ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಎಟಿಎಂ ನಿಯೋಜಿಸುವ ಸಲುವಾಗಿ ಆರ್ ಬಿಐ ನ ಹಣಕಾಸು ನೀತಿ ಸಮಿತಿಯ ಏಳನೇ ದ್ವೈಮಾಸಿಕ ಸಭೆಯಲ್ಲಿ, 6 ಸದಸ್ಯರ ಸಮಿತಿ ರಚಿಸುವ ತೀರ್ಮಾನ ಕೈಗೊಳ್ಳಲಾಯಿತು.
ವಿ ಜಿ ಕಣ್ಣನ್ ನೇತೃತ್ವದ ಸಮಿತಿಯು ಎಟಿಎಂ ಶುಲ್ಕಗಳ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಈ ನಿಟ್ಟಿನಲ್ಲಿ ಎಟಿಎಂ ವಹಿವಾಟುಗಳಿಗೆ ಇರುವ ವೆಚ್ಚಗಳು, ಶುಲ್ಕಗಳು ಮತ್ತು ಇಂಟರ್ಚೇಂಜ್ ಶುಲ್ಕದ ಅಸ್ತಿತ್ವದಲ್ಲಿರುವ ರಚನೆಗಳು ಮತ್ತು ಮಾದರಿಗಳನ್ನು ಸಮಿತಿಯು ಪರಿಶೀಲಿಸುತ್ತದೆ.
ಅರು ಸದಸ್ಯರ ಸಮಿತಿಯು ಎರಡು ತಿಂಗಳಲ್ಲಿ ತನ್ನ ಮೊದಲನೇ ಸಭೆಯ ಸಂದರ್ಭದಲ್ಲಿ ಪರಿಶೀಲನಾ ವರದಿ ನೀಡಲಿದೆ ಎಂದು ಆರ್ ಬಿಐ ಪ್ರಕಟಣೆ ತಿಳಿಸಿದೆ.

ಆರ್ ಬಿಐ ಮಾರ್ಗದರ್ಶಿ ಸೂತ್ರದ ಪ್ರಕಾರ, ಉಳಿತಾಯ ಖಾತೆ ಠೇವಣಿದಾರರು ತಿಂಗಳಲ್ಲಿ 5 ಬಾರಿ ಶುಲ್ಕ ರಹಿತ ವಹಿವಾಟು ನಡೆಸಬಹುದಾಗಿದೆ. ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುವ ಪ್ರತಿ ವ್ಯವಹಾರಕ್ಕೆ ನಿರ್ಧಿಷ್ಟ ಮೊತ್ತದ ಶುಲ್ಕ ವಿಧಿಸಲಾಗುವುದು.

Leave a Comment