ಎಚ್. ಡಿ.ಕುಮಾರಸ್ವಾಮಿ ಸಿಡಿ ಬಿಡುಗಡೆ ಒಂದು ರಾಜಕೀಯ ಗಿಮಿಕ್: ಬಿ.ವೈ.ವಿಜಯೇಂದ್ರ

ಅರಸಿಕೆರೆ, ಜ. 11  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಗಳೂರು ಗಲಭೆ ಕುರಿತು ಬಿಡುಗಡೆಮಾಡಿರುವ ವಿಡಿಯೋ ಒಂದು ರಾಜಕೀಯ ಗಿಮಿಕ್ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಖಾಸಗಿ ಕಾರ್ಯಕ್ರಮ ಪ್ರಯುಕ್ತ ಶನಿವಾರ ನಗರಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮಂಗಳೂರು ಗಲಭೆ ಮುಂದಿಟ್ಟುಕೊಂಡು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.
ಸರ್ಕಾರದ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಬಗ್ಗೆ ಸ್ಥಳೀಯ ಶಾಸಕರು ಲಘುವಾಗಿ ಮಾತನಾಡುತ್ತಿರುವ ಕುರಿತು ತಿಳಿದು ಬಂದಿದೆ. ಇಂತಹ ಯಾವುದೇ ಬೆದರಿಕೆಗೆ ಯಾರೂ ಎದೆಗುಂದುವ ಅಗತ್ಯವಿಲ್ಲ. ಅಲ್ಲದೇ, ಪಕ್ಷದ ಕಾರ್ಯಕರ್ತರು ‌ಹಾಗೂ ಮುಖಂಡರಿಗೆ ತೊಂದರೆ ನೀಡಿದರೆ ಸಹಿಸಲು ಸಾಧ್ಯವಿಲ್ಲ ಎಂದರು.
ಶಾಸಕರ ಪ್ರವೃತ್ತಿ ಹೀಗೆಯೇ ಮುಂದುವರಿದರೆ ನಿಮ್ಮೊಂದಿಗೆ ಹೋರಾಟಕ್ಕಿಳಿಯಲು ಹಿಂದೇಟು ಹಾಕುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ ಎಂದರು.
ನಗರಕ್ಕೆ ಭೇಟಿ ನೀಡಿದ ಅವರನ್ನು ಮೈಸೂರು ಪೇಟಾ ತೊಡಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

Leave a Comment