ಎಚ್‌ಐವಿ ಲಕ್ಷಣಗಳು

ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಈ ಲೇಖನ

ಎಚ್ ಐವಿ ಸೋಂಕು ತಗುಲುವುದು ಹೆಚ್ಚಾಗಿ ಹಲವು ಸಂಗಾತಿಗಳ ಜತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆ ಹಾಗೂ ಒಬ್ಬರು ಬಳಸಿದ ಸಿರಿಂಜ್ ನ್ನು ಮತ್ತೊಬ್ಬರು ಬಳಸುವ ಮೂಲಕ. ಮಾದಕದ್ರವ್ಯ ಸೇವನೆ ವೇಳೆ ಸಿರಿಂಜ್ ಗಳನ್ನು ಇದೇ ರೀತಿ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಎಚ್ ಐವಿ ಬರುವ ಸಾಧ್ಯತೆಯು ಅಧಿಕವಾಗಿರುವುದು. ಆದರೆ ಎಚ್ ಐವಿ ಸೋಂಕು ಬಂದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

ನೀವು ಅಸುರಕ್ಷಿತ ಲೈಂಗಿಕ ಜೀವನ ನಡೆಸುತ್ತಿದ್ದರೆ ಆಗ ನಿಮಗೆ ಎಚ್ ಐವಿ ಬರುವ ಸಾಧ್ಯತೆಗಳು ಇವೆ. ಇದನ್ನು ನೀವು ಪರೀಕ್ಷಿಸಿಕೊಳ್ಳುವುದು ಅತೀ ಅಗತ್ಯ. ಹೆಚ್ಚಿನ ಜನರಿಗೆ ಹೆಚ್ ಐವಿ ಸೋಂಕು ಬಂದ ವೇಳೆ ಜ್ವರದ ಅನುಭವವಾಗುವುದು.

ಎಚ್ ಐವಿ ಸೋಂಕಿನ ಲಕ್ಷಣಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಎಚ್ ಐವಿ ಸೋಂಕಿನ ಮೊದಲ ಲಕ್ಷಣವು ದೇಹದೊಳಗೆ ಸೋಂಕು ಒಗ್ಗಿಕೊಂಡ ೧-೨ ತಿಂಗಳಲ್ಲೇ ಕಾಣಿಸುವುದು. ಈ ವೈರಸ್ ವಿರುದ್ಧ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಹೋರಾಡುವ ವೇಳೆ ತೀವ್ರ ಜ್ವರ ಕಾಣಿಸಿಕೊಳ್ಳುವುದು. ಈ ಮೂಲಕ ಪರೀಕ್ಷೆ ಮಾಡಿಕೊಂಡರೆ ಎಚ್ ಐವಿ ವೈರಸ್ ನ್ನು ಪತ್ತೆ ಮಾಡಬಹುದು. ಈ ಲೇಖನದಲ್ಲಿ ಎಚ್ ಐವಿ ಸೋಂಕಿನ ಕೆಲವು ಲಕ್ಷಣಗಳ ಬಗ್ಗೆ ತಿಳಿಯುವ.

ಮೊದಲ ಲಕ್ಷಣ: ತೀವ್ರ ಜ್ವರ

ಎಚ್ ಐವಿಯ ಮೊದಲ ಲಕ್ಷಣವೆಂದರೆ ತೀವ್ರವಾಗಿ ಕಾಡುವಂತಹ ಜ್ವರ. ಇದರೊಂದಿಗೆ ಕೆಲವು ಇತರ ಲಕ್ಷಣಗಳಾಗಿರುವ ನಿಶ್ಯಕ್ತಿ, ದುಗ್ಡರಸ ಗ್ರಂಥಿ ಊತ ಮತ್ತು ಗಂಟಲಿನ ಊತ ಕಾಣಿಸುವುದು.

ಎರಡನೇ ಲಕ್ಷಣ: ನಿಶ್ಯಕ್ತಿ ಮತ್ತು ತಲೆನೋವು

ಪ್ರತಿರೋಧಕ ವ್ಯವಸ್ಥೆಯಲ್ಲಿ ಉಂಟಾಗಿರುವಂತಹ ಉರಿಯೂತದಿಂದಾಗಿ ನಿಮ್ಮ ದೇಹವು ನಿಶ್ಯಕ್ತಿ ಮತ್ತು ಆಯಾಸದಿಂದ ಬಳಲಬಹುದು. ಕೆಲವೊಂದು ಸಲ ನಡೆಯುವಾಗ ಹೆಜ್ಜೆ ತಪ್ಪಿದಂತೆ ಮತ್ತು ಉಸಿರಾಡಲು ಸಮಸ್ಯೆಯಾಗಹುದು. ನಿಶ್ಯಕ್ತಿಯು ಎಚ್ ಐವಿಯ ಆರಂಭಿಕ ಅಥವಾ ಅಂತಿಮ ಹಂತದ ಲಕ್ಷಣವಾಗಿರಬಹುದು.

 ದುಗ್ದಗ್ರಂಥಿಗಳಲ್ಲಿ ಊತ, ಸ್ನಾಯುಗಳಲ್ಲಿ ಸೆಳೆತ ಮತ್ತು ಗಂಟು ನೋವು

ದುಗ್ದ ಗ್ರಂಥಿಗಳು ದೇಹದ ಪ್ರತಿರೋಧಕ ವ್ಯವಸ್ಥೆಯ ಒಂದು ಭಾಗವಾಗಿದೆ ಮತ್ತು ಇದು ರಕ್ತಕ್ಕೆ ಬ್ಯಾಕ್ಟೀರಿಯಾ ಮತ್ತು ವೈರಸ್ ದಾಳಿ ಮಾಡದಂತೆ ರಕ್ಷಣೆ ನೀಡುತ್ತದೆ. ಸೋಂಕು ಕಾಣಿಸಿಕೊಂಡ ವೇಳೆ ಇದರಲ್ಲಿ ಉರಿಯೂತ ಉಂಟಾಗುವುದು. ಹೆಚ್ಚಿನ ದುಗ್ದ ಗ್ರಂಥಿಗಳು ಕಂಕುಳ, ತೊಡೆಸಂಧು ಮತ್ತು ಕುತ್ತಿಗೆಯಲ್ಲಿ ಇರುವುದು. ಇದರ ಪರಿಣಾವಾಗಿ ಈ ಭಾಗಗಳಲ್ಲಿ ನೋವು ಹಾಗೂ ಸೆಳೆತ ಕಂಡುಬರುವುದು.

 ಚರ್ಮದ ಗುಳ್ಳೆಗಳು

ಎಚ್ ಐವಿ ಸೋಂಕಿನ ಆರಂಭಿಕ ಅಥವಾ ಅಂತಿಮ ಹಂತದಲ್ಲಿ ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಕೆಲವೊಂದು ಸಲ ಗುಳ್ಳೆಗಳು ಬಿಸಿಮುಟ್ಟಿದಾಗ ಇರುವಂತಹ ಗುಳ್ಳೆಗಳಂತೆ ಇರುವುದು. ಇದು ತುರಿಕೆ ಉಂಟು ಮಾಡಿ ಗುಲಾಬಿ ಬಣ್ಣದಲ್ಲಿರುವುದು.

ವಾಕರಿಕೆ, ವಾಂತಿ ಮತ್ತು ಭೇದಿ

ಎಚ್ ಐವಿ ಸೋಂಕು ದೇಹವನ್ನು ಪ್ರವೇಶಿಸಿದ ಆರಂಭದಲ್ಲಿ ಕೆಲವರಿಗೆ ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯು ಕಾಣಿಸುವುದು. ಅದಾಗ್ಯೂ, ಎಚ್ ಐವಿ ಸೋಂಕಿನ ಅಂತಿಮ ಹಂತದಲ್ಲಿ ವಾಕರಿಕೆ, ವಾಂತಿ ಮತ್ತು ಭೇದಿ ಕಂಡುಬರುವುದು. ಇದು ಕೆಲವೊಂದು ಅವಕಾಶವಾದಿ ಸೋಂಕಿನಿಂದಾಗಿ ಕಂಡುಬರುವುದು. ಈ ವೇಳೆ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯ. ಭೇದಿಯು ನಿಲ್ಲದೆ ಇದ್ದರೆ ಮತ್ತು ಸಾಮಾನ್ಯ ಚಿಕಿತ್ಸೆಗೆ ಇದು ಸ್ಪಂದಿಸದೆ ಇದ್ದರೆ ಇದು ಎಚ್ ಐವಿ ಸೋಂಕಾಗಿರಬಹುದು.

ಗಂಟಲು ನೋವು ಮತ್ತು ಒಣ ಕೆಮ್ಮು

ತೀವ್ರ ರೀತಿಯಲ್ಲಿ ಕಾಡುವ ಒಣ ಕೆಮ್ಮು ವಾರಗಳು ಹಾಗೂ ತಿಂಗಳುಗಳ ಕಾಲವಿದ್ದರೆ ಆಗ ಇದನ್ನು ಎಚ್ ಐವಿ ರೋಗಿಯ ಲಕ್ಷಣವೆಂದು ಹೇಳಬಹುದಾಗಿದೆ.

ರಾತ್ರಿ ಬೆವರುವುದು

ಎಚ್ ಐವಿಯ ಆರಂಭಿಕ ಹಂತದಲ್ಲಿ ಕೆಲವು ಜನರಿಗೆ ರಾತ್ರಿ ವೇಳೆ ಬೆವರಲು ಆರಂಭವಾಗಬಹುದು. ಸೋಂಕು ತೀವ್ರ ರೂಪ ಪಡೆದಾಗ ಇದು ಮತ್ತಷ್ಟು ಹೆಚ್ಚಾಗಬಹುದು. ಇದು ಸೆಕೆ ಅಥವಾ ವ್ಯಾಯಾಮಕ್ಕೆ ಸಂಬಂಧಿಸಿದ್ದಲ್ಲ.

ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಸರಿಯಾದ ಕ್ರಮದಲ್ಲಿ ಎಚ್ ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ. ನೀವು ಹಲವಾರು ಸಂಗಾತಿಗಳೊಂದಿಗೆ ಸೆಕ್ಸ್ ನಡೆಸಿದ್ದರೆ ಆಗ ಖಂಡಿತವಾಗಿಯೂ ನೀವು ಪರೀಕ್ಷೆ ಮಾಡಿಸಿಕೊಳ್ಳಿ. ಬೇಗನೆ ಪರೀಕ್ಷೆ ಮಾಡಿಸಿಕೊಂಡು ಎಚ್ ಐವಿ ಪತ್ತೆಯಾದರೆ ಇದನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನ ಸಾಗಿಸಬಹುದು.

Leave a Comment